BIG BREAKING : 20 ಲಕ್ಷ ಕೊಟಿ ಪ್ಯಾಕೇಜ್‍ನಲ್ಲಿ 7 ಪ್ರಮುಖ ವಲಯಗಳಿಗೆ ಭರ್ಜರಿ ಗಿಫ್ಟ್.!   

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 17- ಡೆಡ್ಲಿ ಕೊರೊನಾ ದಾಳಿಯಿಂದ ವ್ಯಾಪಕ ಸಾವು ಮತ್ತು ಸೋಂಕು ಹಾಗೂ ತೀವ್ರ ಆರ್ಥಿಕ ಕುಸಿತಕ್ಕೆ ಕಾರಣವಾಗಿರುವ ದೇಶಕ್ಕೆ ಪುನಶ್ಚೇತನ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿರುವ 20 ಲಕ್ಷ ಕೊಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್‍ನಲ್ಲಿ ಇಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಏಳು ಪ್ರಮುಖ ವಲಯಗಳಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ.

ರಾಜ್ಯಗಳಿಗೆ ನೆರವು, ಆರೋಗ್ಯ, ಶಿಕ್ಷಣ, ಎಂಜಿ ನರೇಗಾ ಯೋಜನೆ, ಉದ್ಯಮ ಮತ್ತು ಕಂಪೆನಿ ಸರಳೀಕರಣ, ಉದ್ಯಮಕ್ಕೆ ಇಂದು ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ.

ಆರೋಗ್ಯ ಕ್ಷೇತ್ರಕ್ಕೆ 15 ಸಾವಿರ ಕೋಟಿ, ರಾಜ್ಯ ಸರ್ಕಾರಗಳ ಆದಾಯ ನಷ್ಟ ಭರಿಸಲು 4113 ಕೋಟಿ ರೂ. ಹಣ ಬಿಡುಗಡೆ, ಕೊರೊನಾ ವಾರಿಯರ್ಸ್‍ಗಳಿಗೆ 50 ಲಕ್ಷ ರೂ.ಗಳ ವಿಮೆ, ಅಗತ್ಯ ವಸ್ತುಗಳ ಖರೀದಿಗಾಗಿ 3750 ಕೋಟಿ ರೂ. ಮೀಸಲು, ಟೆಸ್ಟ್ ಲ್ಯಾಬ್, ಟೆಸ್ಟ್ ಕಿಟ್‍ಗಳಿಗಾಗಿ 500 ಕೋಟಿ ರೂ.- ಇವು ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ 5ನೆ ಮತ್ತು ಕೊನೆಯ ಪ್ಯಾಕೇಜ್‍ನ ಮುಖ್ಯಾಂಶಗಳು.

# ಆರೋಗ್ಯ ರಕ್ಷಣೆಗೆ ಒತ್ತು:
ಆರೋಗ್ಯ ಕ್ಷೇತ್ರಕ್ಕಾಗಿ ವಿಶೇಷ ಒತ್ತು ನೀಡಿರುವ ಕೇಂದ್ರ ಸರ್ಕಾರ, 15 ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಸಾರ್ವಜನಿಕ ಆರೋಗ್ಯ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು, ದೇಶದ ಎಲ್ಲ ಜಿಲ್ಲೆಗಳಲ್ಲೂ ಸೋಂಕು ತಡೆ ವಿಶೇಷ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಅಂತೆಯೇ ಎಲ್ಲ ಗ್ರಾಮಗಳಲ್ಲೂ ಆರೋಗ್ಯ ಕೇಂದ್ರಗಳನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಸಚಿವರು ವಿವರಿಸಿದರು.ದೇಶದ ಪ್ರತಿಯೊಂದು ತಾಲ್ಲೂಕುಗಳಲ್ಲೂ ಪಬ್ಲಿಕ್ ಹೆಲ್ತ್ ಬ್ಲಾಕ್‍ಗಳನ್ನು ಸ್ಥಾಪಿಸಲಾಗುತ್ತದೆ. ಎಲ್ಲ ಜಿಲ್ಲೆಗಳಲ್ಲೂ ಪ್ರಯೋಗಾಲಯಗಳನ್ನು ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

# ಶಿಕ್ಷಣಕ್ಕಾಗಿ ಹಲವು ಯೋಜನೆ:
ಕೊರೊನಾ ಹಾವಳಿಯಿಂದ ಬಾಧಿತವಾಗಿರುವ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮಹತ್ವದ ಯೋಜನೆಗಳನ್ನು ರೂಪಿಸಿದೆ. ಆನ್‍ಲೈನ್ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ ನೂರು ವಿಶ್ವವಿದ್ಯಾನಿಲಯಗಳಲ್ಲಿ ಮೇ 30ರಿಂದ ಆನ್‍ಲೈನ್ ಕೋರ್ಸ್‍ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಜತೆಗೆ ಶಿಕ್ಷಣಕ್ಕಾಗಿಯೇ ಮೂರು ಪ್ರತ್ಯೇಕ ಚಾನಲ್‍ಗಳನ್ನು ಸ್ಥಾಪಿಸಲಾಗುತ್ತದೆ. ಹಂತ ಹಂತವಾಗಿ ವಿದ್ಯಾಕ್ಷೇತ್ರಕ್ಕಾಗಿ ಒಟ್ಟು 12 ವಾಹಿನಿಗಳು ಸೇರ್ಪಡೆಯಾಗಲಿವೆ. ಡಿಟಿಹೆಚ್ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ.  ಆನ್‍ಲೈನ್ ವ್ಯವಸ್ಥೆಯಡಿ ಪ್ರತಿದಿನ 4 ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತದೆ. 1 ರಿಂದ 12ನೆ ತರಗತಿ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಕ್ಷಣ ಚಾನೆಲ್‍ಗಳು ಆರಂಭವಾಗಲಿವೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದರು.

ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಪ್ರಧಾನಮಂತ್ರಿ-ಇ ವಿದ್ಯಾ ಯೋಜನೆಯನ್ನು ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಘೋಷಿಸಿದೆ. ಒನ್ ಕ್ಲಾಸ್ ಒನ್ ಚಾನೆಲ್ ಮತ್ತು ದೀಕ್ಷಾ ಆನ್‍ಲೈನ್ ಮತ್ತು ಡಿಜಿಟಲ್ ಪ್ಲಾಟ್‍ಫಾರಂ ಯೋಜನೆಯೂ ಸಹ ಇದರಲ್ಲಿ ಸೇರ್ಪಡೆಯಾಗಲಿದೆ ಎಂದು ಅವರು ತಿಳಿಸಿದರು.

ಅಂಧ ವಿದ್ಯಾರ್ಥಿಗಳಿಗಾಗಿ ರೇಡಿಯೋ ಮೂಲಕ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ದಿವ್ಯಾಂಗರಿಗಾಗಿ ಪ್ರತ್ಯೇಕ ಪಠ್ಯ ಪುಸ್ತಕ ನೀಡಲಾಗುತ್ತದೆ ಎಂದು ಹಣಕಾಸು ಸಚಿವರು ತಿಳಿಸಿದರು.

# ಸುಸ್ತಿದಾರ ವಿಮೋಚನೆ:
ಉದ್ಯಮಕ್ಕೆ ಭರ್ಜರಿ ಗಿಫ್ಟ್ ನೀಡಿರುವುದನ್ನು ಮುಂದುವರಿಸಿರುವ ಕೇಂದ್ರ ಹಣಕಾಸು ಸಚಿವಾಲಯ ಕೊರೊನಾ ಲಾಕ್‍ಡೌನ್‍ನಿಂದಾಗಿ ಸಾಲ ಹಣ ಮರುಪಾವತಿ ಮಾಡದಿದ್ದರೆ ಅಂತಹವರನ್ನು ಸುಸ್ತಿದಾರರನ್ನಾಗಿ ಪರಿಗಣಿಸುವುದಿಲ್ಲ ಎಂದು ನಿರ್ಮಲಾ ಪ್ರಕಟಿಸಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ದಿವಾಳಿ ಎಂದು ಘೋಷಿಸುವ ಮಿತಿಯನ್ನು ಒಂದು ಕೋಟಿ ರೂ.ಗೆ ಏರಿಸಲಾಜಗಿದೆ. ಅಲ್ಲದೆ, ಸಂಕಷ್ಟದಲ್ಲಿರುವ ಉದ್ಯಮಗಳ ದಿವಾಳಿತನ ಘೋಷಣೆಯನ್ನು ಒಂದು ವರ್ಷ ಕಾಲ ಮುಂದುವರಿಸಲಾಗಿದೆ ಎಂದು ಕೇಂದ್ರ ಸಚಿವರು ಪ್ರಕಟಿಸಿದರು. ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ದೊಡ್ಡ ರಿಲೀಫ್ ಲಭಿಸಿದಂತಾಗಿದೆ.

# ಕಾರ್ಪೊರೇಟ್ ಕಂಪೆನಿಗಳಿಗೆ ರಿಲೀಫ್:
ಕಾರ್ಪೊರೇಟ್ ಕಂಪೆನಿಗಳಿಗೆ ದೊಡ್ಡ ಮಟ್ಟದ ರಿಲೀಫ್ ನೀಡಿರುವ ಹಣಕಾಸು ಸಚಿವರು ಅವುಗಳ ಸಂಕೀರ್ಣತೆಯನ್ನು ಸರಳೀಕರಣಗೊಳಿಸಲು ಮುಂದಾಗಿದ್ದಾರೆ. ಅಪರಾಧ ಮತ್ತು ಅಪರಾಧೀಕರಣ ಪ್ರಕ್ರಿಯೆಯಿಂದ ಕಾರ್ಪೊರೇಟ್ ಕಂಪೆನಿಗಳನ್ನು ಕಾನೂನು ಮಿತಿಗೆ ಒಳಪಟ್ಟು ಮುಕ್ತಗೊಳಿಸಲು ಕಾನೂನಿಗೆ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ.

ತಾಂತ್ರಿಕ ಮತ್ತು ಇತರ ಲೋಪಗಳಿಂದ ಅಪರಾಧ ಕಂಡುಬರುವ ಪ್ರಕರಣಗಳನ್ನು ಕೈ ಬಿಡಲು ನಿರ್ಧರಿಸಲಾಗಿದೆ. ದಂಡ ವಿಧಿಸಬಹುದಾದ ಏಳು ಪ್ರಕರಣಗಳನ್ನು ಕಾನೂನಿನಿಂದ ಮುಕ್ತಗೊಳಿಸಲು ಚಿಂತನೆ ನಡೆಸಲಾಗಿದ್ದು, ಐದು ಅಪರಾಧ ಪ್ರಕರಣಗಳನ್ನು ಪರ್ಯಾಯ ಕ್ರಮಗಳ ಮೂಲಕ ಇತ್ಯರ್ಥಗೊಳಿಸಲು ಉದ್ದೇಶಿಸಲಾಗಿದೆ.

ಎಲ್ಲ ವಲಯಗಳಲ್ಲೂ ಖಾಸಗಿ ಬಂಡವಾಳಕ್ಕೆ ಕಂಪೆನಿಗಳಿಗೆ ಅವಕಾಶ ನೀಡುವ ಮೂಲಕ ಖಾಸಗೀಕರಣಕ್ಕೆ ವಿಶೇಷ ಒತ್ತು ನೀಡಲಾಗಿದೆ ಎಂದು ಸಚಿವರು ಪ್ರಕಟಿಸಿದರು.

# ರಾಜ್ಯಸರ್ಕಾರಕ್ಕೆ ಕೊಡುಗೆ:
ಕೊರೊನಾ ಲಾಕ್‍ಡೌನ್‍ನಿಂದಾಗಿ ಎಲ್ಲ ರಾಜ್ಯಗಳ ಆರ್ಥಿಕತೆ ಮತ್ತು ಆದಾಯ ಕುಂಠಿತವಾಗಿದ್ದು, ಸರ್ಕಾರಗಳಿಗೆ ನೆರವು ನೀಡುವ ಉದ್ದೇಶದಿಂದ 4113 ಕೋಟಿ ರೂ.ಗಳ ಅನುದಾನ ನೀಡಲಾಗುತ್ತದೆ. ರಾಜ್ಯಗಳ ಸಾಲಮಿತಿ ಪ್ರಮಾಣವನ್ನು ಶೇ.60ರಷ್ಟು ಹೆಚ್ಚಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

ಎಲ್ಲ ರಾಜ್ಯಗಳಿಗೂ ಈವರೆಗೆ 46,138 ಕೋಟಿ ರೂ. ತೆರಿಗೆ ನಷ್ಟವನ್ನು ಪರಿಹಾರ ರೂಪದಲ್ಲಿ ನೀಡಲಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ 12,390 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. ಎಸ್‍ಡಿಆರ್‍ಎಫ್ ನಿಧಿಯಡಿ 11,092 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

Facebook Comments

Sri Raghav

Admin