ನಿರ್ಮಲಾನಂದನಾಥ ಸ್ವಾಮೀಜಿ ಹುಟ್ಟುಹಬ್ಬ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.21-ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಹುಟ್ಟುಹಬ್ಬವನ್ನು ಪರಿಸರ ಕಾಳಜಿ ಮತ್ತು ಕೊರೊನಾ ವಾರಿಯರ್ಸ್‍ಗಳಿಗೆ ಸನ್ಮಾನದ ಮೂಲಕ ಆಚರಿಸಿರುವುದು ಅರ್ಥಪೂರ್ಣವಾಗಿದೆ ಎಂದು ಶ್ರೀ ಸೌಮ್ಯನಾಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜರಾಜೇಶ್ವರಿನಗರದ ಕರ್ನಾಟಕ ರಾಜ್ಯ ಒಕ್ಕಲಿಗರ ಡೈರೆಕ್ಟರಿ ಸಂಸ್ಥೆ ಆವರಣದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ಪದವೀಧರ ವೇದಿಕೆ, ರಾಜರಾಜೇಶ್ವರಿ ನಗರ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ದೀಕ್ಷೆ ಪಡೆದ ಮತ್ತು ಹುಟ್ಟುಹಬ್ಬದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಕ್ಕಲಿಗರ ಡೈರೆಕ್ಟರಿ ಸಂಸ್ಥೆ ಮಾಡುವ ಕಾರ್ಯಗಳು ವಿಶೇಷ ರೀತಿಯಲ್ಲಿರುತ್ತವೆ ಎನ್ನುವುದಕ್ಕೆ ಈ ದಿನದ ಅರ್ಥಪೂರ್ಣ ಕಾರ್ಯಕ್ರಮವೇ ಸಾಕ್ಷಿ. ಶ್ರೀಮಠ ಎಲ್ಲ ಜಾತಿ ಜನರ ವಿದ್ಯೆ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತ ಬಂದಿದೆ. ಬಡ ಅನಾಥ ಹೆಣ್ಣು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದೆ. ಇದೇ ರೀತಿ ಒಕ್ಕಲಿಗರ ಡೈರೆಕ್ಟರಿ ಸಂಸ್ಥೆಯಿಂದ ಕೆ.ಟಿ.ಚಂದ್ರು ಅವರು ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಮಾಡಲು ದೇವರು ಶಕ್ತಿ ದಯಪಾಲಿಸಲಿ ಎಂದು ನುಡಿದರು.

ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಸನ್ಯಾಸತ್ವ ದೀಕ್ಷೆ ನೀಡಿದ ಮತ್ತು ಹುಟ್ಟುಹಬ್ಬದ ಸವಿನೆನಪಿಗಾಗಿ ಜನಪರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಶ್ವ ಒಕ್ಕಲಿಗರ ಡೈರೆಕ್ಟರಿ ಸಂಪಾದಕ ಕೆ.ಟಿ.ಚಂದ್ರು ತಿಳಿಸಿದರು.

ಗುರುಗಳಿಗೆ ಮರ-ಗಿಡ, ಪ್ರಕೃತಿ ಮೇಲೆ ಅಪಾರ ಪ್ರೀತಿ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ವನ ಸಂರಕ್ಷಣೆ ಟ್ರಸ್ಟ್ ಎಂಬ ಸಂಸ್ಥೆ ವತಿಯಿಂದ ಲಕ್ಷಾಂತರ ಗಿಡ-ಮರಗಳನ್ನು ಕರ್ನಾಟಕ ರಾಜ್ಯಾದ್ಯಂತ ಬೆಳೆಸಿದ್ದಾರೆ. ಅವರ ನೆನಪಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕೋವಿಡ್ ಸಂದರ್ಭದಲ್ಲಿ ಎಲ್ಲೆಡೆ ಕೋವಿಡ್ ನಿವಾರಣಾ ಕೇಂದ್ರಗಳನ್ನು ತೆರೆದು ಉಚಿತ ಔಷಧಿ ಕಿಟ್‍ಗಳನ್ನು ವಿತರಿಸಿದ್ದಾರೆ. ಅದರ ನೆನಪಿಗಾಗಿ ಲಸಿಕೆ ಹಾಕಿಸುವ ಹಾಗೂ ವಾರಿಯರ್ಸ್‍ಗಳಿಗೆ ಸನ್ಮಾನಿಸುವ ಕಾರ್ಯ ಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಡಾ.ಎಚ್.ಎಂ.ವೆಂಕಟಪ್ಪ ಮಾತನಾಡಿ, ಕರ್ನಾಟಕ ರಾಜ್ಯ ಒಕ್ಕಲಿಗರ ಡೈರೆಕ್ಟರಿ ಸಂಸ್ಥೆಯಿಂದ ವಿವಿಧ ಜನಪರ ಕಾರ್ಯಕ್ರಮ ಗಳನ್ನು ಸತತವಾಗಿ ನಡೆಸುತ್ತಿದ್ದು, ಮುಂದೆಯೂ ಇಂತಹ ಹತ್ತು-ಹಲವು ಕಾರ್ಯಕ್ರಮಗಳನ್ನು ನಡೆಸಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಪರಿಸರ ಪ್ರೇಮಿ ಪ್ರಶಸ್ತಿಯನ್ನು ನ್ಯಾಷನಲ್ ಎಜುಕೇಷನ್ ಟ್ರಸ್ಟ್‍ನ ಟ್ರಸ್ಟಿ ವೆಂಕಟಪ್ಪ ಅವರಿಗೆ ಪ್ರದಾನ ಮಾಡಲಾಯಿತು. ರಾಜರಾಜೇಶ್ವರಿ ನಗರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನರೇಂದ್ರಕುಮಾರ್, ರೆಡ್‍ಕ್ರಾಸ್ ಸಂಸ್ಥೆಯ ವೈದ್ಯರು, ಪೊಲೀಸ್ ಇನ್‍ಸ್ಪೆಕ್ಟರ್ ಶಿವಣ್ಣ, ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರು, ಕಾಂಗ್ರೆಸ್ ಯುವ ಮುಖಂಡ ತಿಬ್ಬೇಗೌಡ, ಜಗದೀಶ್, ದಾಸಪ್ಪ ಜಗದೀಶ್‍ಗೌಡ ಮತ್ತಿತರರಿದ್ದರು.

Facebook Comments