ರಾಮಮಂದಿರ ಭೂಮಿ ಪೂಜೆಗೆ ನಿರ್ಮಲಾನಂದನಾಥ ಶ್ರೀಗಳಿಗೆ ಆಹ್ವಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಆಗಮಿಸುವಂತೆ ಆದಿಚುಂಚನಗಿರಿ ಕ್ಷೇತ್ರದ ಮಠಾಧೀಶರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಆಹ್ವಾನ ನೀಡಲಾಗಿದೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಮುಂಬರುವ ಆಗಸ್ಟ್ 5ರಂದು ನಡೆಯಲಿರುವ ರಾಮಮಂದಿರದ ಭೂಮಿಪೂಜೆಗೆ ಆಗಮಿಸುವಂತೆ ವಿಶ್ವ ಹಿಂದೂ ಪರಿಷತ್‍ನ ವಿವಿಧ ಮುಖಂಡರು ಹಾಗೂ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಪದಾಧಿಕಾರಿಗಳು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳು ಅಯೋಧ್ಯೆ ರಾಮಮಂದಿರದ ಭೂಮಿಪೂಜೆಗೆ ಆಗಮಿಸಬೇಕೆಂದು ಆಹ್ವಾನಿಸಿದ್ದು, ಭಾಗವಹಿಸಲು ಶ್ರೀಗಳು ಸಮ್ಮತಿ ಸೂಚಿಸಿದ್ದಾರೆ.

ಇದೇ ವೇಳೆ ಅವರ ಅಮೃತ ಹಸ್ತದಿಂದ ಪುಣ್ಯಕ್ಷೇತ್ರಕ್ಕೆ ಮೃತ್ತಿಕೆ (ಮಣ್ಣು) ಸ್ವೀಕರಿಸಲಾಯಿತು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡರು ತಿಳಿಸಿದರು.

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದಿಂದಲೂ ಹಲವು ಸ್ವಾಮೀಜಿಗಳು, ಸಂಘ-ಪರಿವಾರದ ಮುಖಂಡರು ಭಾಗವಹಿಸಲಿದ್ದಾರೆ.

ಈ ಪುಣ್ಯಕಾರ್ಯದ ನಿಮಿತ್ತ ರಾಜ್ಯದ ವಿವಿಧ ದೇವಸ್ಥಾನ ಹಾಗೂ ಮಠಗಳ ಪುಣ್ಯಮಣ್ಣು, ಕಾವೇರಿ, ತುಂಗಾ, ನೇತ್ರಾವತಿ, ಕಪಿಲಾ, ಸೇರಿದಂತೆ ರಾಜ್ಯದ ಪ್ರಮುಖ ನದಿಗಳ ಪುಣ್ಯಜಲವನ್ನು ಸಂಗ್ರಹಿಸಿ ಕಳುಹಿಸಿಕೊಡಲಾಗಿದೆ.

ಆದಿಚುಂಚನಗಿರಿ ಶ್ರೀಮಠಕ್ಕೆ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಆಗಮಿಸಿ ಆಹ್ವಾನ ನೀಡಲಾಗಿದ್ದು, ಶ್ರೀಗಳು ಭೂಮಿಪೂಜೆಗೆ ಬರಲು ಸಮ್ಮತಿ ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‍ನ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ್, ಬೆಂಗಳೂರು ಮಹಾನಗರದ ಕಾರ್ಯದರ್ಶಿ ಕೃಷ್ಣಮೂರ್ತಿ, ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷ ಮುನಿರಾಜು, ಕಾರ್ಯದರ್ಶಿ ನರಸಿಂಹಮೂರ್ತಿ ಇನ್ನಿತರರಿದ್ದರು.

Facebook Comments

Sri Raghav

Admin