ಪರಾರಿಯಾದ ನಿತ್ಯಾನಂದನ ವಿರುದ್ಧ ಸಾಕ್ಷಿ ಸಂಗ್ರಹಕ್ಕೆ ಪೊಲೀಸರ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಅಹ್ಮದಾಬಾದ್, ನ.22- ಆಶ್ರಮಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣ ಬೆಳಕಿಗೆ ಬಂದ ನಂತರ ಸ್ವಘೋಷಿತ ದೇವ ಮಾನವ ಸ್ವಾಮಿ ನಿತ್ಯಾನಂದ ದೇಶ ಬಿಟ್ಟು ಪಲಾಯನಗೈದಿದ್ದು ಆತನ ವಿರುದ್ಧ ಸಾಕ್ಷಿ ಸಂಗ್ರಹಿಸಲು ಗುಜರಾತ್ ಪೊಲೀಸರು ಸತತ ಪ್ರಯತ್ನ ಮುಂದುವರೆಸಿದ್ದಾರೆ.

ನಿತ್ಯಾನಂದನ ಇಬ್ಬರು ಶಿಷ್ಯರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ತಮ್ಮ ಆಶ್ರಮವನ್ನು ನಡೆಸಲು ಅನುಯಾಯಿಗಳಿಂದ ಹಣ ಸಂಗ್ರಹಿಸಲು ಇಬ್ಬರು ಮಕ್ಕಳನ್ನು ಅಪಹರಿಸಿ ಬಂಧಿಸಿಟ್ಟ ಆರೋಪದ ಮೇಲೆ ಈಗಾಗಲೇ ನಿತ್ಯಾನಂದನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ನಿತ್ಯಾನಂದ ದೇಶ ಬಿಟ್ಟು ಹೋಗಿದ್ದು ಅಗತ್ಯ ಬಿದ್ದರೆ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಾರೆ ಎಂದು ಅಹ್ಮದಾಬಾದ್ ಗ್ರಾಮಾಂತರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಕರ್ನಾಟಕದಲ್ಲಿ ಅತ್ಯಾಚಾರ ಆರೋಪದ ಮೇಲೆ ನಿತ್ಯಾನಂದನ ವಿರುದ್ಧ ಕೇಸು ದಾಖಲಿಸಲಾಗಿದ್ದು ಆತ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಇಲ್ಲಿ ಆತನನ್ನು ಹುಡುಕುವುದು ಸಮಯ ವ್ಯರ್ಥ ಎಂದು ಅವರು ಹೇಳಿದರು.

ಕರ್ನಾಟಕ-ತಮಿಳುನಾಡಿನಲ್ಲಿ ವಿವಾದಗಳಿಂದ ಸಾಕಷ್ಟು ಸುದ್ದಿಯಾಗಿದ್ದ ನಿತ್ಯಾನಂದ ಈಗ ಗುಜರಾತ್ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದ್ದು , ಆತನ ವಿರುದ್ಧ ಸಾಕ್ಷಿ ಸಂಗ್ರಹ ಕಾರ್ಯ ಮುಂದುವದೆದಿದೆ.

Facebook Comments