ಉತ್ತಮ ರಸ್ತೆ ಮತ್ತು ಮೂಲಭೂತ ಸೌಕರ್ಯಗಳು ಬೇಕಿದ್ದ ಸುಂಕ ಪಾವತಿಸಿ : ಗಡ್ಕರಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.16- ಉತ್ತಮ ರಸ್ತೆ ಮತ್ತು ಇತರ ಮೂಲಭೂತ ಸೌಕರ್ಯಗಳು ಬೇಕಿದ್ದರೆ ಹೆದ್ದಾರಿಗಳಲ್ಲಿ ಸುಂಕ ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಕಳೆದ 5 ವರ್ಷಗಳಲ್ಲಿ ಒಟ್ಟು 40,000 ಕಿ.ಮೀ ಹೆದ್ದಾರಿಗಳನ್ನು ನಿರ್ಮಿಸಿದೆ ಇದು ಹಿಂದಿನ ಯುಪಿಎ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ನಿರ್ಮಿಸಿದ್ದ ಹೆದ್ದಾರಿಗಳಿಗಿಂತಲೂ ಶೇ.60ರಷ್ಟು ಹೆಚ್ಚಿನ ಸಾಧನೆಯಾಗಿದೆ ಎಂದು ಹೇಳಿದರು.

ಲೋಕಸಭೆಯಲ್ಲಿಂದು ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕಾಗಿ ಅನುದಾನ ಬೇಡಿಕೆ ವಿಷಯ ಕುರಿತು ಚರ್ಚೆಯಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ದೇಶ ದ ವಿವಿಧೆಡೆ ಹೆದ್ದಾರಿಗಳಲ್ಲಿ ಅನಗತ್ಯವಾಗಿ ಟೋಲ್(ಸುಂಕ)ಗಳನ್ನು ವಸೂಲಿ ಮಾಡಲಾಗುತ್ತಿದೆ ಎಂದು ಕೆಲವು ಸದಸ್ಯರು ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ಹೆದ್ದಾರಿಗಳಲ್ಲಿ ವಾಹನ ಸವಾರರು ಪಾವತಿಸುವ ಸುಂಕ ಶುಲ್ಕಗಳು ನಿರರ್ಥಕವಾಗುವುದಿಲ್ಲ. ಅದನ್ನು ಹೆದ್ದಾರಿಗಳ ಅಭಿವೃದ್ದಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದಕ್ಕಾಗಿ ವಿನಿಯೋಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನಿಮಗೆ ಉತ್ತಮ ರಸ್ತೆಗಳು ಮತ್ತು ಮೂಲಸೌಲಭ್ಯಗಳು ಬೇಕೇ? ಹಾಗದರೆ ಹೆದ್ದಾರಿಗಳಲ್ಲಿ ಸುಂಕಗಳನ್ನು ಪಾವತಿಸಬೇಕಿರುವುದು ಅನಿವಾರ್ಯ ಎಂದು ಸಚಿವರು ಸದನದಲ್ಲಿ ವ್ಯಾಖ್ಯಾನಿಸಿದರು.

Facebook Comments