ತಾಂತ್ರಿಕ ದೋಷ : ಸಾರಿಗೆ ಸಚಿವ ಗಡ್ಕರಿ, 158 ಪ್ರಯಾಣಿಕರಿದ್ದ ವಿಮಾನ ಮೇಲೇರಲೇ ಇಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ನಾಗ್‍ಪುರ,- ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹಾಗೂ 158 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದಾಗಿ ಮೇಲೇರುವಲ್ಲಿ ಎರಡು ಬಾರಿ ವಿಫಲವಾದ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಿನ್ನೆ ಬೆಳಗ್ಗೆ ನಡೆದಿದೆ.

ನಾಗ್‍ಪುರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ಏರ್‍ಲೈನ್ಸ್ ಸಂಸ್ಥೆಯ 6ಇ-639 ಸಂಖ್ಯೆಯ ವಿಮಾನ ಬೆಳಗ್ಗೆ 7.50ಕ್ಕೆ ನವದೆಹಲಿಗೆ ತೆರಳಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ವಿಮಾನ ಮೇಲೇರಲಿಲ್ಲ.

ಈ ವಿಮಾನ ಬೆಳಗ್ಗೆ 9.35ಕ್ಕೆ ನವದೆಹಲಿಗೆ ತಲುಪಬೇಕಿತ್ತು. ನಂತರ ವಿಮಾನದ ತಾಂತ್ರಿಕ ದೋಷವನ್ನು ಸರಿಪಡಿಸಿ 10.30ಕ್ಕೆ ವಿಮಾನ ಮೇಲೇರಲು ಯತ್ನಿಸಿತು. ಆಗಲೂ ಕೂಡ ಟೇಕ್ ಆಫ್ ಆಗಲು ಸಾಧ್ಯವೇ ಆಗಲಿಲ್ಲ. ತಾಂತ್ರಿಕ ದೋಷದಿಂದಾಗಿ ಈ ವಿಮಾನ ಯಾನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಗ್‍ಪುರದ ಸಂಸದರೂ ಆಗಿರುವ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳು ಹಾಗೂ ಹಡಗು ಖಾತೆ ಸಚಿವರಾದ ನಿತಿನ್ ಗಡ್ಕರಿ ಅಧಿಕೃತ ಕಾರ್ಯಕ್ರಮದ ನಿಮಿತ್ತ ಇಂದು ಬೆಳಗ್ಗೆ ದೆಹಲಿಗೆ ತೆರಳಬೇಕಿತ್ತು. ಆದರೆ ಎರಡು ಬಾರಿ ಪ್ರಯತ್ನ ಪಟ್ಟರೂ ಅವರು ಪ್ರಯಾಣಿಸಬೇಕಿದ್ದ ವಿಮಾನ ವಿಫಲಗೊಂಡಿದ್ದರಿಂದ ಅವರು ದೆಹಲಿ ಪ್ರಯಾಣಕ್ಕಾಗಿ ಪರಿಹಾರ ವ್ಯವಸ್ಥೆ ಮಾಡಿಕೊಂಡರು ಎಂದು ಅವರ ಕಚೇರಿಯ ಮೂಲಗಳು ತಿಳಿಸಿವೆ.

Facebook Comments