ಗಣೇಶ ಚತುರ್ಥಿಯಂದು ಚಲಾವಣೆಗೆ ಬರಲಿದೆ ನಿತ್ಯಾನಂದನ ಹೊಸ ಕರೆನ್ಸಿ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.20- ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ಹಿಂಸೆ ಆಪಾಧನೆಗಳಿಂದ ತಪ್ಪಿಸಿಕೊಳ್ಳಲು ಭಾರತದಿಂದ ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ಬಿಡದಿಯ ನಿತ್ಯಾನಂದ ಸ್ವಾಮಿಯ ಹೊಸ ವಿಲಕ್ಷಣ ಸಂಗತಿಯೊಂದು ಬೆಳಕಿಗೆ ಬಂದಿದೆ.

ತಾನು ಕೈಲಾಸ ಸೃಷ್ಟಿಸಿ ಅದರಲ್ಲಿ ವಾಸವಾಗಿರುವುದಾಗಿ ಹೇಳಿಕೊಂಡಿರುವ ನಿತ್ಯಾನಂದ ಆ.22ರ ಗಣೇಶ ಚತುರ್ಥಿ ದಿನದಂದು ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಎಂಬ ಯೋಜನೆಯನ್ನು ಅನಾವರಣಗೊಳಿಸಿ ತನ್ನದೇ ಆದ ಕರೆನ್ಸಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾನೆ.

ಈ ಕುರಿತು ವಿಡಿಯೋವೊಂದರಲ್ಲಿ ಹೇಳಿಕೆ ನೀಡಿರುವ ನಿತ್ಯಾನಂದ, ಈ ಸಂಬಂಧ ಒಂದು ರಾಷ್ಟ್ರದೊಂದಿಗೆ ತಿಳುವಳಿಕೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾನೆ. ಈ ಬಗ್ಗೆ ಗಣೇಶ ಚತುರ್ಥಿಯ ಶುಭ ದಿನದಂದು ತಾನು ಸಂಪೂರ್ಣ ವಿವರ ನೀಡುವುದಾಗಿ ಆತ ಘೋಷಿಸಿದ್ದಾನೆ.

ತಮ್ಮ ಕೈಲಾಸ ದೇಶಕ್ಕೆ ಸಂಬಂಸಿದ 300 ಪುಟಗಳ ಆರ್ಥಿಕ ನೀತಿಗಳನ್ನು ಒಳಗೊಂಡ ದಾಖಲೆಗಳು ಮತ್ತು ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಕರೆನ್ಸಿಯನ್ನು ಆ.22ರಂದು ನಾನು ಬಿಡುಗಡೆ ಮಾಡುತ್ತೇನೆ ಎಂದು ಬಿಡದಿ ಸ್ವಾಮೀಜಿ ಹೇಳಿದ್ದಾರೆ.

ನಾನು ಬಿಡುಗಡೆ ಮಾಡಲಿರುವ ಕೈಲಾಸ ಕರೆನ್ಸಿ ಸಂಪೂರ್ಣ ಕಾನೂನು ಬದ್ಧ ಮತ್ತು ನ್ಯಾಯ ಸಮ್ಮತವಾಗಿರಲಿದೆ. ಇದರಲ್ಲಿ ಯಾವುದೇ ಅಕ್ರಮ ವಿರುವುದಿಲ್ಲ. ನನ್ನ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳಬಹುದು ಆತ ತಿಳಿಸಿದ್ದಾನೆ.

ರೋಮ್‍ನ ಕ್ಯಾಥೋಲಿ ಕ್ರೈಸ್ತರ ಪವಿತ್ರ ನೆಲೆಯಾದ ವ್ಯಾಟಿಕನ್ ಸಿಟಿಯಲ್ಲಿ ಈಗಾಗಲೇ ಅಲ್ಲಿಯದೇ ಆದ ಕರೆನ್ಸಿ ಜಾರಿಯಲ್ಲಿದ್ದು, ಅದೇ ಮಾದರಿಯನ್ನು ತಾವು ಅನುಸರಿಸಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಮೂಲಕ ಅದನ್ನ ವಿನಾಯಕ ಚೌತಿ ದಿನದಂದು ಬಿಡುಗಡೆ ಮಾಡುತ್ತೇನೆ ಎಂದು ಆತ ಹೇಳಿಕೊಂಡಿದ್ದಾನೆ.

ಅತ್ಯಾಚಾರ ಸೇರಿದಂತೆ ವಿವಿಧ ಆರೋಪಗಳಲ್ಲಿ ವಿಚಾರಣೆ ಮತ್ತು ಬಂಧನದಿಂದ ಪಾರಾಗಲು ನಿತ್ಯಾನಂದ ಕಳೆದ ವರ್ಷ ರಾತ್ರೋರಾತ್ರಿ ದೇಶದಿಂದ ಪರಾರಿಯಾಗಿದ್ದಾನೆ.

Facebook Comments

Sri Raghav

Admin