ಪಕ್ಷದಲ್ಲಿ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಗೆ ಅವಕಾಶವಿಲ್ಲ : ಡಿಸಿಎಂ ಅಶ್ವತ್ಥನಾರಾಯಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿಸಲು ಬಿರುಸಿನ ಕಾರ್ಯಕ್ರಮಗಳನ್ನು ಹಾಕಿಕೊಂಡಿರುವ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಪಕ್ಷದಲ್ಲಿ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಗೆ ಅವಕಾಶವಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳ ಜತೆ ಮಂಗಳವಾರ ಚರ್ಚೆ ನಡೆಸಿದ ಅವರು, ತಳಮಟ್ಟದಿಂದ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕು. ಕಾರ್ಯಕರ್ತರನ್ನು ಎಲ್ಲ ಹಂತಗಳಲ್ಲೂ ವಿಶ್ವಾಸಕ್ಕೆ ತೆಗೆದುಕೊಂಡು ಮುಖಂಡರು ಕೆಲಸ ಮಾಡಬೇಕು. ಪಕ್ಷ ಸಂಘಟನೆಯನ್ನು ಜಿಲ್ಲೆಯ ಪ್ರತಿಮೂಲೆಗೂ ವಿಸ್ತರಿಸಬೇಕು ಎಂದು ಸೂಚಿಸಿದರು.

ರಾಮನಗರದಲ್ಲಿ ಬದಲಾವಣೆ ತರಬೇಕಾದ ಅಗತ್ಯವಿದೆ. ಇದಕ್ಕೆ ಪೂರಕವಾಗಿ ಕಾರ್ಯಕರ್ತರು ಕೆಲಸ ಮಾಡಬೇಕು. ನಮ್ಮಲ್ಲಿ ಕುಟುಂಬ ‌ರಾಜಕಾರಣಕ್ಕೆ ಅವಕಾಶವೇ ಇಲ್ಲ. ಪಕ್ಷಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರೇ ಮುಂದಿನ ನಾಯಕರು. ಹೀಗಾಗಿ ನಿಸ್ವಾರ್ಥವಾಗಿ ಕೆಲಸ‌ ಮಾಡಿ. ಫಲಿತಾಂಶವನ್ನು ಪಕ್ಷಕ್ಕೆ ಬಿಡಿ ಎಂದು ಮುಖಂಡರಿಗೆ ಕಿವಿಮಾತು ಹೇಳಿದರು.

# ನಮ್ಮದು ಜನರ ಸರಕಾರ:
ಜನರು ನಮ್ಮ ಪಕ್ಷದ ಜತೆ ನಿಲ್ಲಲು ತಯಾರಿದ್ದಾರೆ. ಆದರೆ ನಾವೇ ಅವರ ಬಳಿ ಹೋಗಲು ಮೀನಮೇಷ ಎಣಿಸುತ್ತಿದ್ದೇವೆ. ಈ ಪರಿಸ್ಥಿತಿ ಬದಲಾಗಬೇಕು. ಬೇರೆ ಪಕ್ಷಗಳ ಜತೆಗಿನ ಪರಸ್ಪರ ಹೊಂದಾಣಿಕೆಯಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ. ಜನರ ಅಶೋತ್ತರಗಳನ್ನು ನಾವು ಶ್ರದ್ಧೆಯಿಂದ ಈಡೇರಿಸಬೇಕು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಅವರ ಸರಕಾರ ಮಾಡುತ್ತಿರುವ ಅನೇಕ ಜನಪರ ಕರ್ಯಕ್ರಮಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಬೇಕು. ಎರಡೂ ಕಡೆ ಇರುವುದು ಜನಪರ ಸರಕಾರಗಳು ಎಂದು ಮತದಾರರಿಗೆ ಮನವರಿಕೆ ಮಾಡಬೇಕು ಎಂದು ಡಿಸಿಎಂ ಮುಖಂಡರಿಗೆ ತಾಕೀತು ಮಾಡಿದರು.

# ಕೋವಿಡ್, ಜನರಿಗೆ ಮಾಹಿತಿ:
ಎರಡೂ ಸರಕಾರಗಳು ಕೋವಿಡ್ ವಿರುದ್ಧ ಪ್ರಬಲವಾಗಿ
ಹೋರಾಟ ನಡೆಸುತ್ತಿವೆ. ವಿವಿಧ ಯೋಜನೆಗಳ ಜಾರಿ, ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳ ಪೂರೈಕೆ, ಆಸ್ಪತ್ರೆಗಳ ನಿರ್ವಹಣೆ, ಸೋಂಕು ಹರಡದಂತೆ ಕ್ರಮ ಸೇರಿದಂತೆ ಅನೇಕ ಕ್ರಮಗಳನ್ನು ಸರಕಾರ ಕೈಗೊಂಡಿದೆ.

ಅದೇ ರೀತಿ ಮೋದಿ ಅವರ ಸರಕಾರ ಲಾಕ್ ಡೌನ್ ಕಾಲದಲ್ಲಿ ಜಾರಿಗೆ ತಂದ ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ ದೇಶದ 80 ಕೋಟಿ ಜನರಿಗೆ ಉಪಯೋಗವಾಗಿದೆ. ಏಪ್ರಿಲ್ ನಿಂದ ಜೂನ್ ವರೆಗೆ ಮಾಸಿಕ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ, ಗೋಧಿ ಹಾಗೂ ಪ್ರತಿ ಕುಟುಂಬಕ್ಕೆ 1 ಕೆಜಿ ಬೇಳೆಯನ್ನು ಉಚಿತವಾಗಿ ನೀಡಲಾಗಿತ್ತು.

ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ಅಬ್ಬರ ಕಡಿಮೆಯಾಗದ ಕಾರಣ ಈ ಯೋಜನೆಯನ್ನು ಮುಂದಿನ 5 ತಿಂಗಳು, ಅಂದರೆ ನವೆಂಬರ್ ವರೆಗೂ ಮುಂದುವರೆಸುವುದಾಗಿ ಮೋದಿ ಅವರೇ ಘೋಷಿಸಿದ್ದಾರೆ. ಈ ಕಾರ್ಯಕ್ರಮಕ್ಕೆ 90 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಕಳೆದ 3 ತಿಂಗಳಲ್ಲಿ ಭರಿಸಿದ್ದ 60 ಸಾವಿರ ಕೋಟಿಯೂ ಸೇರಿದರೆ ಒಟ್ಟು 1.50 ಲಕ್ಷ ಕೋಟಿ ಕೊಡುತ್ತಿರುವುದು ಅತ್ಯಂತ ಜನಪರವಾಗಿದೆ.

ಅದರಲ್ಲೂ ಒಂದು ದೇಶ, ಒಂದು ಪಡಿತರ ಎಂಬ ಕಾರ್ಯಕ್ರಮ ನಮ್ಮ ದೇಶಕ್ಕೆ ವರದಾನವಾಗಿದೆ. ಈ ವಿವರಗಳನ್ನು ಜನರಿಗೆ ತಲುಪಿಸಬೇಕು ಎಂದು ಮುಖಂಡರಿಗೆ ಡಿಸಿಎಂ ನಿರ್ದೇಶನ ನೀಡಿದರು.

# ಗಟ್ಟಿಯಾದ ಪಡೆ ಕಟ್ಟಬೇಕು:
ಜಿಲ್ಲೆಯಲ್ಲಿ ಅತ್ಯಂತ ಗಟ್ಟಿಯಾದ ಬಿಜೆಪಿ ಪಡೆಯನ್ನು ಕಟ್ಟಬೇಕು. ಇದಕ್ಕಾಗಿ ಮುಖಂಡರು ನಿರಂತರವಾಗಿ ಕಾರ್ಯಕರ್ತರ ಜತೆ ಸಂಪರ್ಕದಲ್ಲಿ ಇರಬೇಕು. ಆನ್ ಲೈನ್ ಸಭೆಗಳ ಮೂಲಕ ಅವರನ್ನು ತಲುಪಬೇಕು.

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ತಯಾರಿ ‌ಮಾಡಬೇಕು. ಮಂಡಲ್ ಮಟ್ಟದಲ್ಲಿ ಕೆಲಸ ಮಾಡುವ ಪದಾಧಿಕಾರಿಗಳ ಪಡೆಯನ್ನು ಕಟ್ಟುವುದರ ಜತೆಗೆ, ಎಲ್ಲ ಬೂತ್ ಮಟ್ಟದಲ್ಲಿ ಸಂಪೂರ್ಣವಾಗಿ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಕಾಂತರಾಜ್, ರಾಮನಗರ ಜಿಲ್ಲಾ ಬಿಜೆಪಿ ಜಿಲ್ಲಾಧಕ್ಷ ಎಚ್.ದೇವರಾಜ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕಗಳ ಮಂಡಲ ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದರು.

Facebook Comments

Sri Raghav

Admin