ಮೋದಿ ಮಾತಿಗೆ ಭೂತಾನ್ ವಿದ್ಯಾರ್ಥಿಗಳು ಫುಲ್ ಫಿದಾ..!

ಈ ಸುದ್ದಿಯನ್ನು ಶೇರ್ ಮಾಡಿ

ಥಿಂಪು, ಆ.18- ಅತ್ಯಾಧುನಿಕ ಯುಗದಲ್ಲಿ ಎದುರಾಗುವ ಸಮಸ್ಯೆ-ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಹಿಮಾಲಯ ರಾಷ್ಟ್ರ ಭೂತಾನ್‍ನನ್ನು ಜಾಗತಿಕ ಮಟ್ಟದಲ್ಲಿ ಪ್ರಖ್ಯಾತಗೊಳಿಸಲು ಶ್ರಮಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆ ರಾಷ್ಟ್ರದ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಭೂತಾನ್‍ನಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಮೋದಿ ಇಂದು ರಾಜಧಾನಿ ಥಿಂಪುವಿನಲ್ಲಿ ರಾಯಲ್ ಯೂನಿವರ್ಸಿಟಿ ಆಫ್ ಭೂತಾನ್‍ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ನಿಮ್ಮಲ್ಲಿ ಪ್ರತಿಭೆ, ಸಾಮಥ್ರ್ಯ ಇದೆ. ಅದನ್ನು ನೀವು ಸದ್ಬಳಕೆ ಮಾಡಿಕೊಳ್ಳಬೇಕು. ನೀವು ಭವಿಷ್ಯದಲ್ಲಿ ವಿಜ್ಞಾನಿಯಾಗಬಹುದು ಅಥವಾ ರಾಷ್ಟ್ರನಾಯಕರಾಗಬಹುದು. ಇಲ್ಲವೇ ಖ್ಯಾತ ನಾಮರಾಗಬಹುದು. ಯಾವುದೇ ಯಶಸ್ಸು ಅಥವಾ ಫಲ ಸುಲಭವಾಗಿ ದಕ್ಕುವಂತಹದ್ದಲ್ಲ. ಅದಕ್ಕೆ ಅಪಾರ ಪರಿಶ್ರಮ ಮತ್ತು ಅಚಲ ವಿಶ್ವಾಸ ಮುಖ್ಯ ಎಂದರು.

ಸಾಧನೆ ಹಾದಿಯಲ್ಲಿ ಅನೇಕ ಎಡರುತೊಡರುಗಳು ಮತ್ತು ಅಡ್ಡಿಆತಂಕಗಳು ಎದುರಾಗುವುದು ಸಹಜ. ಅವುಗಳನ್ನು ಸವಾಲಾಗಿ ಸ್ವೀಕರಿಸಿ ಹೊಸ ಅನ್ವೇಷಣೆಯ ಮಾರ್ಗೋಪಾಯಗಳ ಮೂಲಕ ಸಮಸ್ಯೆ, ತೊಂದರೆಗಳನ್ನು ಮೆಟ್ಟಿ ನಿಂತರೆ ಯಶಸ್ಸು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಮೋದಿ ಸ್ಫೂರ್ತಿ ತುಂಬಿದರು.

ಭೂತಾನ್ ಅನೇಕ ತೊಂದರೆ, ಸಮಸ್ಯೆಗಳನ್ನು ಎದುರಿಸಿ ಮುಂದೆ ಬಂದಿರುವ ಏಷ್ಯಾದ ಮಾದರಿ ದೇಶ. ಭಾರತ ಮತ್ತು ಭೂತಾನ್ ನಡುವೆ ಅನೇಕ ವರ್ಷಗಳಿಂದಲೂ ಉತ್ತಮ ಬಾಂಧವ್ಯವಿದೆ.

ನನ್ನ ಈ ಪ್ರವಾಸದಲ್ಲಿ ಉಭಯ ದೇಶಗಳ ನಡುವೆ ವಿಜ್ಞಾನ, ತಂತ್ರಜ್ಞಾನ, ಡಿಜಿಟಲ್, ಬಾಹ್ಯಾಕಾಶ ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಅನೇಕ ಮಹತ್ವದ ವಿಷಯಗಳ ಸಂಬಂಧ ಒಡಂಬಡಿಕೆಯಾಗಿದೆ ಎಂದರು.

ಈ ದೇಶದ ಅಭಿವೃದ್ಧಿಗೆ ಭಾರತ ಅಗತ್ಯವಾದ ಎಲ್ಲ ಸಹಕಾರ ನೀಡಲು ಸದಾ ಬದ್ಧ ಎಂದು ನರೇಂದ್ರ ಮೋದಿ ವಿದ್ಯಾರ್ಥಿಗಳ ಪ್ರಚಂಡ ಕರತಾಡನದೊಂದಿಗೆ ಘೋಷಿಸಿದರು.

ಉತ್ತಮ ಸಂಬಂಧ ಮತ್ತು ಸೌಹಾರ್ದತೆ ಇದ್ದ ಕಡೆ ಶಾಂತಿ ನೆಲೆಸುತ್ತದೆ. ಶಾಂತಿ ಇದ್ದ ಕಡೆ ಸಮೃದ್ಧಿ ತಾನಾಗಿಯೇ ದಕ್ಕುತ್ತದೆ. ಸಮೃದ್ಧಿ ಇದ್ದರೆ ದೇಶ ಪ್ರಗತಿ ಪಥದತ್ತ ಸಾಗುತ್ತದೆ ಎಂದು ಅರ್ಥಗರ್ಭಿತವಾಗಿ ಹೇಳಿದರು. ಪ್ರಧಾನಿ ಮೋದಿ ಅವರ ಲವಲವಿಕೆ, ಉತ್ಸಾಹದ ಸ್ಫೂರ್ತಿ ತುಂಬಿದ ವಾಗ್ಝರಿಯಿಂದ ಭೂತಾನ್ ವಿದ್ಯಾರ್ಥಿಗಳು ಪ್ರಭಾವಿತರಾದರು.

Facebook Comments

Sri Raghav

Admin