ಆರ್ಟಿಕಲ್ 370 ರದ್ದತಿಗೆ 1 ವರ್ಷ, ಪುಲ್ವಾಮಾ ಮಾದರಿ ದಾಳಿಗೆ ಉಗ್ರರ ಸಂಚು, ಕಾಶ್ಮೀರದಲ್ಲಿ ಹೈಅಲರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಆ.5-ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370ನೆ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ.

ಕಣಿವೆ ಪ್ರಾಂತ್ಯದಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಕೇಂದ್ರಾಡಳಿತ ಪ್ರದೇಶದಾದ್ಯಂತ ಕಫ್ರ್ಯೂ ವಿಧಿಸಲಾಗಿದೆ. ಉಗ್ರಗಾಮಿಗಳು ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕಣಿವೆ ಪ್ರಾಂತ್ಯದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಬಾರಾಮುಲ್ಲಾ ಸೇರಿದಂತೆ ಕೆಲವೆಡೆ ಸ್ಫೋಟಕಗಳನ್ನು ಭದ್ರತಾ ಪಡೆಗಳು ಪತ್ತೆ ಮಾಡಿದ್ದು, ನಡೆಯಬಹುದಾಗಿದ್ದ ವಿಧ್ವಂಸಕ ಕೃತ್ಯಗಳನ್ನು ತಪ್ಪಿಸಿದ್ದಾರೆ.

ಪಾಕಿಸ್ತಾನ ಬೆಂಬಲಿತ ಪ್ರತ್ಯೇಕತಾವಾದಿಗಳು ಮತ್ತು ಉಗ್ರಗಾಮಿಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ದಾಳಿ ನಡೆಯುವುದನ್ನು ತಪ್ಪಿಸಲು ಜಮ್ಮು-ಕಾಶ್ಮೀರಾದ್ಯಂತ ನಿನ್ನೆಯಿಂದ ಜಾರಿಯಲ್ಲಿರುವ ಕಫ್ರ್ಯೂ ಮುಂದುವರಿದಿದೆ.

ರಾಜಧಾನಿ ಶ್ರೀನಗರ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಎಲ್ಲ ಜಿಲ್ಲೆಗಳಲ್ಲೂ ಕಫ್ರ್ಯೂ ವಿಧಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕಳೆದ ವರ್ಷ ಆ.5ರಂದು ರದ್ದುಗೊಳಿಸಿತ್ತು.

ಪ್ರತ್ಯೇಕತಾವಾದಿಗಳು ಮತ್ತು ಪಾಕಿಸ್ತಾನ ಬೆಂಬಲಿತ ಗುಂಪುಗಳು ಕರಾಳ ದಿನಾಚರಣೆ ಆಚರಿಸಿ ಹಿಂಸಾತ್ಮಕ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ನಿನ್ನೆಯಿಂದ ಕಾಶ್ಮೀರದಾದ್ಯಂತ ಕಫ್ರ್ಯೂ ವಿಧಿಸಲಾಗಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin