‘ಉತ್ತರ ಕರ್ನಾಟಕ ಉಳಿಸಿ’ ಎಂದು ನಾಳೆ ಬೃಹತ್ ಪ್ರತಿಭಟನಾ ರ‍್ಯಾಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.2- ನೆರೆ ಸಂತ್ರಸ್ತರಿಗೆ ಸ್ಪಂದಿಸದೇ ಇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ನಾಳೆ ರಾಜಾಜಿನಗರದ ರಾಮಮಂದಿರ ಆಟದ ಮೈದಾನದಿಂದ ಫ್ರೀಡಂಪಾರ್ಕ್ ವರೆಗೆ ಉತ್ತರ ಕರ್ನಾಟಕ ಉಳಿಸಿ ಎಂಬ ಬೃಹತ್ ಪ್ರತಿಭಟನಾ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ್ ಆರ್.ಮೇಟಿ, ನೆರೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೇಂದ್ರ ಸಮೀಕ್ಷೆ ನಡೆಸಿದರೂ ಪರಿಹಾರ ಕೊಟ್ಟಿಲ್ಲ.

ಹೀಗಾಗಿ ಸರ್ಕಾರಗಳ ಗಮನ ಸೆಳೆಯಲು ಉತ್ತರ ಕರ್ನಾಟಕ ಉಳಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಅವರು ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

# ಎಚ್.ಕೆ.ಪಾಟೀಲ್ ಆಕ್ರೋಶ :  ಬೆಂಗಳೂರು, ಅ.2- ಜನರ ಬಗ್ಗೆ ಅನುಕಂಪ ತೋರದ ಪ್ರಧಾನಿ ನರೇಂದ್ರ ಮೋದಿ ದೇವರಾ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್, ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನು ಬೇಜವಾಬ್ದಾರಿ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರಾಗಿ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ಜನರ ಬದುಕೇ ಬರಿದಾಗಿದೆ. ನೆರೆ-ಬರದಿಂದಾಗಿ ಸಾವಿರಾರು ಗ್ರಾಮಗಳಿಗೆ ಹಾನಿಯಾಗಿದೆ. ಅವೆಲ್ಲವೂ ಪುನಃ ನಿರ್ಮಾಣವಾಗಬೇಕು ಎಂದರು.

ಲಕ್ಷಾಂತರ ಮಂದಿಗೆ ನೆಲೆ ಇಲ್ಲದೆ ಕಂಗಾಲಾಗಿದ್ದಾರೆ. ರಾಜ್ಯದ ಜನರ ಈ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಘೋಷಣೆ ಮಾಡದ ಮೋದಿ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ವ್ಯತಿರಿಕ್ತ ಹೇಳಿಕೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಜನರ ಬಗ್ಗೆ ಪ್ರಧಾನಿಗೆ ಅನುಕಂಪವಿಲ್ಲವೇ ? ಜನರ ಬದುಕು ನಾಶವಾಗಿದ್ದರೂ ಈ ರೀತಿ ಹೇಳುವುದು ಎಷ್ಟು ಸರಿ ಎಂದರು.

Facebook Comments