ಮತ್ತೆ ಪ್ರತ್ಯೇಕ ರಾಜ್ಯದ ದ್ವನಿ ಎತ್ತಿದ್ದ ಉಮೇಶ್ ಕತ್ತಿ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಅ.18- ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಮತ್ತೆ ಮುನ್ನಲೆಗೆ ಬಂದಿದೆ.  ಮಾಜಿ ಸಚಿವ, ಬಿಜೆಪಿ ಮುಖಂಡ ಉಮೇಶ್ ಕತ್ತಿಯವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬ ಬೇಡಿಕೆಯನ್ನಿಟ್ಟಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಸತಾರ ಜಿಲ್ಲೆಗಳು ಹಾಗೂ ಉತ್ತರಕರ್ನಾಟಕದ 13 ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕೆಂದು ಉಮೇಶ್ ಕತ್ತಿಯವರು ಮತ್ತೆ ಹೇಳಿಕೆ ನೀಡುವ ಮೂಲಕ ಪ್ರತ್ಯೇಕ ರಾಜ್ಯದ ಬಾಂಬ್ ಹಾಕಿದ್ದಾರೆ.

ಉತ್ತರ ಕರ್ನಾಟಕ ಭಾಗಕ್ಕೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಪದೇ ಪದೇ ಅನ್ಯಾಯವಾಗುತ್ತಲೇ ಬಂದಿದೆ. ಯಾವ ಸರ್ಕಾರಗಳೂ ಅಧಿಕಾರಕ್ಕೆ ಬಂದರೂ ನಮಗೆ ನ್ಯಾಯ ದೊರಕಿಲ್ಲ. ಹೀಗಾಗಿ ಅಭಿವೃದ್ಧಿ ದೃಷ್ಠಿಯಿಂದ ಪ್ರತ್ಯೇಕ ರಾಜ್ಯ ಮಾಡುವುದು ಒಳ್ಳೆಯದು ಎಂಬ ಭಾವನೆಯಿಂದ ಈ ಹೇಳಿಕೆಯನ್ನು ನೀಡುತ್ತಿದ್ದೇನೆ ಎಂದು ಹೇಳಿದರು.

ಈ ಹಿಂದೆಯೂ ಕೂಡ ನಾನು ಪ್ರತ್ಯೇಕ ರಾಜ್ಯದ ಪ್ರಸ್ತಾಪ ಮಾಡಿದ್ದೆ. ಈಗ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ಉತ್ತರ ಕರ್ನಾಟಕ ಭಾಗಕ್ಕೆ ನಿರಂತರ ಅನ್ಯಾಯವಾಗುತ್ತಾ ಬಂದಿದೆ. ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಕೂಡ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸುತ್ತಲೇ ಬಂದಿವೆ. ಹೀಗಾಗಿ ಈ ಭಾಗವನ್ನು ಪ್ರತ್ಯೇಕಿಸಿದರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.

ನಾನು ಉಪ ಮುಖ್ಯಮಂತ್ರಿಯಾಗುವುದಿಲ್ಲ. ಆದರೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಕತ್ತಿಯವರ ಈ ಹೇಳಿಕೆ ಅಖಂಡ ಕರ್ನಾಟಕಕ್ಕೆ ಮುಖ್ಯಮಂತ್ರಿಯೋ ಅಥವಾ ರಾಜ್ಯ ವಿಭಜನೆಯಾದರೆ ಆ ಭಾಗಕ್ಕೆ ಮುಖ್ಯಮಂತ್ರಿಯೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.  ಉತ್ತರ ಕರ್ನಾಟಕವನ್ನು ಪ್ರತ್ಯೇಕಿಸಬೇಕೆಂಬ ಕೂಗು ಬಹಳ ದಿನದಿಂದಲೂ ಕೇಳಿಬಂದಿತ್ತು. ಅಖಂಡ ಕರ್ನಾಟಕದ ಪರಿಕಲ್ಪನೆ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಉತ್ತರ ಕರ್ನಾಟಕವನ್ನು ಪ್ರತ್ಯೇಕಿಸಬಾರದೆಂಬ ಕಾರಣ ಸರ್ಕಾರಗಳು ಹತ್ತು, ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತ ಬಂದಿದ್ದವು.

ನಂಜುಂಡಪ್ಪ ವರದಿ ಅನುಷ್ಠಾನ, 371ಜೆ ಕಲಂ ಜರಿ, ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ, ನ್ಯಾಯಾಲಯ ಸ್ಥಾಪನೆ ಸೇರಿದಂತೆ ಸಾಕಷ್ಟು ಕೆಲಸಗಳನ್ನು ಮಾಡಲಾಗಿತ್ತು. ಉಮೇಶ್ ಕತ್ತಿಯವರು ಯಾವ ದೃಷ್ಠಿಕೋನದಲ್ಲಿ ಪ್ರತ್ಯೇಕ ಕರ್ನಾಟಕದ ಮಾತನ್ನಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಇತ್ತೀಚೆಗೆ ಸಂಭವಿಸಿದ ಭೀಕರ ಮಳೆ, ಪ್ರವಾಹದ ಪರಿಸ್ಥಿತಿ ಉತ್ತರ ಕರ್ನಾಟಕ ಭಾಗದ ಜನರನ್ನು ತಲ್ಲಣಗೊಳಿಸಿತ್ತು. ಅವರಿಗೆ ಸರ್ಕಾರಗಳು ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಕೂಗು ಕೇಳಿಬಂದಿತ್ತು. ಅಲ್ಲದೇ ಹಿರಿಯ ಶಾಸಕರಾದ ಉಮೇಶ್ ಕತ್ತಿಯವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ. ಉಪ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರು ಸಂಪುಟಕ್ಕೂ ಸೇರ್ಪಡೆಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಕರ್ನಾಟಕವನ್ನು ಪ್ರತ್ಯೇಕಿಸುವ ಮಾತುಗಳನ್ನು ಆಡಿರಬಹುದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

Facebook Comments