ಉತ್ತರ ಕರ್ನಾಟಕಕ್ಕೆ 1ಲಕ್ಷ ಕೋಟಿ ಕೊಡಿ : ಮೃತ್ಯುಂಜಯ ಸ್ವಾಮೀಜಿ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.8- ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಮುಂದಿನ ಬಜೆಟ್‍ನಲ್ಲಿ ಒಂದು ಲಕ್ಷ ಕೋಟಿ ರೂ. ಮೀಸಲಿಡಬೇಕೆಂದು ಕೂಡಲಸಂಗಮದ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೃಷ್ಣಾ ಕಣಿವೆಯ ಎಲ್ಲಾ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಅಗತ್ಯ ಅನುದಾನವನ್ನು ಮೀಸಲಿಡಬೇಕು ಎಂದರು. ತೆಲಂಗಾಣ ಮಾದರಿಯಲ್ಲಿ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಾಗುವ ಮೂಲಕ ಉತ್ತರ ಕರ್ನಾಟಕ ಋಣ ತೀರಿಸುವ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕೃಷ್ಣಾ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದರು. ರೈತಪರ ಕೆಲಸ ಮಾಡುವವರು, ಹೋರಾಟಗಾರರು, ಮಠಾಧೀಶರೊಂದಿಗೆ ಉತ್ತರ ಕರ್ನಾಟಕದ ಸಮಗ್ರ ನೀರಾವರಿಗೆ ಒತ್ತಾಯಿಸಿ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.

ಸಮಸ್ತ ಲಿಂಗಾಯಿತರಿಗೆ ಶೇ.16ರಷ್ಟು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸಬೇಕು. ಶೇ.70ರಷ್ಟು ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ಮಹಾರಾಷ್ಟ್ರ ಮಾದರಿಯಲ್ಲಿ ಮೀಸಲಾತಿ ಒದಗಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಜ.14ರಂದು ಕೂಡಲಸಂಗಮದಲ್ಲಿ ನಡೆಯುವ 10ನೇ ಕೃಷಿ ಸಂಕ್ರಾಂತಿ ಹಾಗೂ ಉತ್ತರ ಕರ್ನಾಟಕ ಸಮಗ್ರ ನೀರಾವರಿ ಕುರಿತ ರೈತ ಸಂವಾದದಲ್ಲಿ ಮುಂದಿನ ಬಜೆಟ್‍ನಲ್ಲಿ ಒಂದು ಲಕ್ಷ ಕೋಟಿ ರೂ. ನೀರಾವರಿಗೆ ಮೀಸಲಿಡುವಂತೆ ಒತ್ತಾಯಿಸಲಾಗುವುದು ಎಂದರು.

#ಮೂವರಿಗೆ ಸಚಿವ ಸ್ಥಾನ: ಬಿಜೆಪಿಯಲ್ಲಿ ಪಂಚಮಸಾಲಿ ಸಮುದಾಯದ 15ರಿಂದ 16 ಶಾಸಕರಿದ್ದಾರೆ. ಅವರಲ್ಲಿ ಈಗಾಗಲೇ ಸಿ.ಸಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಮುರುಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ್ ಅವರಿಗೂ ಸಚಿವ ಸ್ಥಾನ ನೀಡಬೇಕೆಂಬುದು ಪಂಚಮಸಾಲಿ ಸಮುದಾಯದವರ ಅಪೇಕ್ಷೆಯಾಗಿದೆ. ಹಾಗೆಯೇ ಅವಕಾಶ ಸಿಗದ ಸಮುದಾಯಗಳಿಗೂ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪರಿಗಣಿಸಬೇಕು ಎಂದರು.

ಗ್ಲೋಬಲ್ ಬಸವ ಪೀಸ್ ಸೆಂಟರ್‍ನ ಅಧ್ಯಕ್ಷ ಶಶಿಧರ್ ಹೆಬ್ಬಾಳ್ ಮಾತನಾಡಿ, ಜಾಗತಿಕವಾಗಿ ಲಿಂಗಾಯಿತ ಸಮುದಾಯವನ್ನು ಸಂಘಟನೆ ಮಾಡುವುದು , ಲಿಂಗಾಯಿತ ಸಂಸತ್ ಆಯೋಜಿಸುವುದು ಬಸವ ಪೀಸ್‍ಸೆಂಟರ್‍ನ ಕಾರ್ಯವಾಗಿದೆ. ವಿಶ್ವದಾದ್ಯಂತ ಬಸವ ತತ್ವ ಪ್ರಚಾರ ಮಾಡುವ ಉದ್ದೇಶದಿಂದ ಈಗಾಗಲೇ ಹತ್ತು ದೇಶಗಳಲ್ಲಿ ಸಂಘಟನೆ ಮಾಡಲಾಗಿದೆ. ಸಿಂಧಗಿ ತಾಲ್ಲೂಕಿನ ಹೊನ್ನಾಳಿ ಶಾಲೆಯನ್ನು ತಾವು ದತ್ತು ತೆಗೆದುಕೊಳ್ಳುವುದಾಗಿಯೂ ಇದೇ ಸಂದರ್ಭದಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿ.ಎಂ.ಚಿಕ್ಕನಗೌಡ, ಡಾ.ಬಿ.ಎಸ್.ಪಾಟೀಲ್, ಡಾ.ಸಂಗಮೇಶಕೊಳ್ಳಿ, ಡಾ.ಸಿ.ಎಸ್.ಸೋಲಾಪುರ, ಸಂಜಯ್‍ಪಾಟೀಲ್‍ಕನವಡಿ, ಅಮರೇಶ್‍ನಾಗನೂರ ಮತ್ತಿತರರು ಪಾಲ್ಗೊಂಡಿದ್ದರು.

Facebook Comments