24 ಗಂಟೆ ಕೆಲಸಕ್ಕೆ ಸಿದ್ಧರಾಗಿ : ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.8- ಹಿಂದೆಂದೂ ಕಂಡರಿಯದಷ್ಟು ಮಳೆ, ಪ್ರವಾಹ ಉತ್ತರ ಕರ್ನಾಟಕದಲ್ಲಿ ಉಂಟಾಗಿದ್ದು, ಸಂತ್ರಸ್ತರ ನೆರವಿಗೆ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಸಿದ್ಧವಿರಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಕ್ ಸೂಚನೆ ನೀಡಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಹಗಲು-ರಾತ್ರಿ ಕೆಲಸ ಮಾಡಬೇಕು.

ಕೇಂದ್ರ ಸರ್ಕಾರದಿಂದ ಅಗತ್ಯ ನೆರವಿನ ಭರವಸೆ ಸಿಕ್ಕಿದೆ. ಸೇನೆ, ದೋಣಿ ಸೇರಿದಂತೆ ಎಲ್ಲ ಆವಶ್ಯಕ ನೆರವು ಪಡೆದು ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ ಮಾಡಲಾಗುವುದು. ತಕ್ಷಣವೇ ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಆಲಮಟ್ಟಿ ಡ್ಯಾಮ್‍ನಿಂದ 5 ಲಕ್ಷ ಕ್ಯೂಸೆಕ್ ನೀರು, ನಾರಾಯಣಪುರ ಡ್ಯಾಮ್‍ನಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ಸಿಎಂ ತಿಳಿಸಿದರು.

ಬೆಳಗಾವಿಯ ಕಬಲಾಪುರದಲ್ಲಿ ಸಿಲುಕಿಕೊಂಡಿರುವ ದಂಪತಿ ರಕ್ಷಣೆ ಮಾಡಲು ಹಾಗೂ ಸದಲಗ ಗುಡ್ಡದಲ್ಲಿ ಸಿಲುಕಿಕೊಂಡಿರುವ 200 ಮಂದಿಯನ್ನು ರಕ್ಷಣೆ ಮಾಡಲು ಎರಡು ಸೇನಾ ಹೆಲಿಕಾಪ್ಟರ್‍ಗಳನ್ನು ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

#ಆರೋಗ್ಯ ಸಿಬ್ಬಂದಿ ರಜೆ ಕಟ್
ಬೆಂಗಳೂರು, ಆ.8- ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಜಿಲ್ಲೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆ.15ರವರೆಗೂ ರಜೆ ಮಂಜೂರು ಮಾಡದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಆ.9, 10,11, 12 ಮತ್ತು 15ನೆ ತಾರೀಖು ಸೇರಿದಂತೆ ನಿರ್ಬಂಧಿತ ರಜೆ , ಸಾರ್ವತ್ರಿಕ ರಜೆ ಒಳಗೊಂಡಂತೆ ಯಾವುದೇ ರೀತಿಯ ರಜೆ ಮಂಜೂರು ಮಾಡದಂತೆ ನಿರ್ದೇಶನ ನೀಡಿದ್ದು , ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಆಡಳಿತಾತ್ಮಕ ವಿಷಯಗಳಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲು ಸೂಚಿಸಲಾಗಿದೆ.

ದಕ್ಷಿಣ ಕನ್ನಡ , ಉತ್ತರ ಕನ್ನಡ , ಕೊಡಗು, ಗದಗ, ಚಿಕ್ಕಮಗಳೂರು ಹಾವೇರಿ, ಶಿವಮೊಗ್ಗ , ಬೀದರ್, ಬೆಳಗಾವಿ, ಚಿಕ್ಕೋಡಿ, ರಾಯಚೂರು, ಬಾಗಲಕೋಟೆ, ಯಾದಗಿರಿ, ವಿಜಯಪುರ, ಕೊಪ್ಪಳ, ಧಾರವಾಡ, ಬಳ್ಳಾರಿ, ಹಾಸನ, ಉಡುಪಿ ಮತ್ತು ಕಲ್ಬುರ್ಗಿ ಜಿಲ್ಲೆಗಳಲ್ಲಿ ನೆರೆ ಹಾವಳಿ ಕಡಿಮೆಯಾಗಿ ಪರಿಸ್ಥಿತಿ ಸುಧಾರಿಸುವವರೆಗೂ ರಜೆ ಮಂಜೂರು ಮಾಡದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದ್ದು , ಎಲ್ಲಾ ಜಿಲ್ಲಾ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ.

Facebook Comments