ಉತ್ತರ ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿದ್ದರೂ ಮುಂದುವರೆದ ಪ್ರವಾಹ ಪರಿಸ್ಥಿತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.25- ರಾಜ್ಯಾದ್ಯಂತ ಮಳೆ ಕಡಿಮೆಯಾಗಿದ್ದರೂ ಉತ್ತರ ಕನ್ನಡ, ಉತ್ತರ ಕರ್ನಾಟಕ, ಮಲೆನಾಡಿನ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ವರುಣನ ಅಬ್ಬರಕ್ಕೆ ಸುಮಾರು 500 ಗ್ರಾಮಗಳು ಜಲಾವೃತಗೊಂಡು ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹದ ಆತಂಕ ಸೃಷ್ಟಿಯಾಗಿದೆ.

ಎನ್‍ಡಿಆರ್‍ಎಫ್ ತಂಡದವರು ಪ್ರವಾಹದಲ್ಲಿ ಸಿಲುಕಿದವರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 10 ಸಾವಿರ ಜನ ಅತಂತ್ರರಾಗಿದ್ದು, ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಬೆಳಗಾವಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದ್ದು, ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ನದಿಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದ್ದು, ಚಿಕ್ಕಮಗಳೂರಿನಲ್ಲಿ ಹೇಮಾವತಿ, ತುಂಗಾ, ಭದ್ರಾ ನೀರಿನ ಮಟ್ಟ ಕಡಿಮೆಯಾಗಿದೆ. ಭಾರೀ ಮಳೆಗೆ ರಾಜ್ಯದಲ್ಲಿ 16 ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದೆ. ಉತ್ತರ ಕನ್ನಡದಲ್ಲಿ ಅತಿ ಹೆಚ್ಚು ಭೂ ಕುಸಿತ ಉಂಟಾಗಿದೆ.

ಎಸ್‍ಡಿಆರ್‍ಎಫ್‍ನ 15 ಪಡೆ ಹಾಗೂ ಎನ್‍ಡಿಆರ್‍ಎಫ್ ಪಡೆಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಕರಾವಳಿ ಮತ್ತು ಮಲೆನಾಡಿನಲ್ಲಿ ಕಳೆದ ಏಳು ದಿನಗಳಲ್ಲಿ 500 ಮಿಮೀ ಮತ್ತು 1200ಮಿಮೀನಷ್ಟು ಮಳೆಯಾಗಿದೆ.

40 ಸಾವಿರ ಜನರು ಬಾತರಾಗಿದ್ದಾರೆ. 283 ಗ್ರಾಮಗಳು ಮತ್ತು 45 ತಾಲ್ಲೂಕುಗಳು ಮಳೆಹಾನಿಗೆ ತುತ್ತಾಗಿವೆ. ರಸ್ತೆಗಳಲ್ಲದೆ ಕೃಷಿ ಭೂಮಿ, ವಿದ್ಯುತ್ ಕಂಬ, ಸೇತುವೆ, ಶಾಲಾ ಕಟ್ಟಡ, ಇತರ ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿಯಾಗಿದೆ ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.

ರಾಜ್ಯದಲ್ಲಿ ಮಳೆ ಅನಾಹುತದಿಂದಾಗಿ ಈವರೆಗೆ ಒಟ್ಟು 9 ಮಂದಿ ಬಲಿಯಾಗಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಪ್ರವಾಹಪೀಡಿತ ವಿವಿಧ ಪ್ರದೇಶಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

Facebook Comments

Sri Raghav

Admin