ಈಗಾಗಲೇ ಪ್ರವಾಹ ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕ ಮಂದಿಗೆ ಮತ್ತೊಂದು ಶಾಕಿಂಗ್ ನ್ಯೂಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.8- ಈಗಾಗಲೇ ಭಾರೀ ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕದ ಜನತೆಗೆ ಮತ್ತೊಂದು ಬರ ಸಿಡಿಲು ಅಪ್ಪಳಿಸಿದೆ. ಮಹಾರಾಷ್ಟ್ರದಲ್ಲಿ ಕಳೆದ 10 ದಿನದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೊಯ್ನಾ ಜಲಾಶಯ ಅಪಾಯದ ಮಟ್ಟ ಮೀರಿದ್ದು, 5 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಿಎಂ ಯಡಿಯೂರಪ್ಪನವರಿಗೆ ತಿಳಿಸಿದ್ದಾರೆ.

ಒಂದು ವೇಳೆ ಕೊಯ್ನಾ ಜಲಾಶಯದಿಂದ 5 ಲಕ್ಷ ಕ್ಯೂಸೆಕ್ ನೀರು ಹರಿದುಬಂದರೆ ಚಿಕ್ಕೋಡಿಯ ಅನೇಕ ಭಾಗಗಳು ಇನ್ನಷ್ಟು ಮುಳುಗಡೆಯಾಗುವ ಸಾಧ್ಯತೆ ಇದೆ. ಇಂದು ಬೆಳಗ್ಗೆ ದೂರವಾಣಿ ಮೂಲಕ ಯಡಿಯೂರಪ್ಪನವರನ್ನು ಸಂಪರ್ಕಿಸಿರುವ ಫಡ್ನವೀಸ್, ಕೊಯ್ನ ಜಲಾಶಯದಲ್ಲಿ ಈಗಾಗಲೇ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ.

ಜಲಾಶಯದಲ್ಲಿ ಹೆಚ್ಚುವರಿಯಾಗಿರುವ ನೀರನ್ನು ಬಿಡುಗಡೆ ಮಾಡದ ಹೋದರೆ ಅಣೆಕಟ್ಟು ಒಡೆದು ಹೋಗುವ ಸಂಭವವಿದೆ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡಬೇಕು. ಯಾವುದೇ ಸಂದರ್ಭದಲ್ಲೂ ಜಲಾಶಯದಿಂದ ನೀರು ಬಿಡುಗಡೆಯಾಗಬಹುದೆಂದು ತಿಳಿಸಿದ್ದಾರೆ.

ಬಿಎಸ್‍ವೈ ಅಸಮಾಧಾನ:
ಕೊಯ್ನಾ ಡ್ಯಾಂ ನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡುವುದಾಗಿ ಫಡ್ನವೀಸ್ ಹೇಳುತ್ತಿದ್ದಂತೆ ಯಡಿಯೂರಪ್ಪ ಕೆಂಡಾಮಂಡಲರಾದರು. ಈಗಾಗಲೇ ಪ್ರವಾಹದಿಂದಾಗಿ ಲಕ್ಷಾಂತರ ಜನರು ನಿರ್ಗತಿಕರಾಗಿದ್ದಾರೆ. ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ.

ಬೆಳೆದು ನಿಂತ ಬೆಳೆ ಕೊಚ್ಚಿ ಹೋಗಿದೆ. ಇಂಥ ವೇಳೆ ನೀರು ಹರಿಸಿದರೆ ನಾವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಪ್ರಶ್ನಿಸಿದ್ದಾರೆ. ಸಾಧ್ಯವಾದಷ್ಟು ಕಡೆ ಮಹಾರಾಷ್ಟ್ರದ ಕಡೆ ನೀರು ಹರಿಸಲು ಕ್ರಮ ಕೈಗೊಳ್ಳಿ.

ನಾವೇ ಸಂಕಷ್ಟದಲ್ಲಿರುವಾಗ ಮತ್ತೊಂದು ತಾಪತ್ರಯ ಉಂಟು ಮಾಡಬೇಡಿ ಎಂದು ಕಡ್ಡಿ ಮುರಿದಂತೆ ಫಡ್ನವೀಸ್‍ಗೆ ಹೇಳಿ ದೂರವಾಣಿ ಕಡಿತಗೊಳಿಸಿದರು. ಈ ಹಿನ್ನೆಲೆಯಲ್ಲಿ ತಕ್ಷಣವೇ ತಗ್ಗುಪ್ರದೇಶಗಳಲ್ಲಿರುವ ಜನರನ್ನು ಸ್ಥಳಾಂತರಿಸುವಂತೆ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Facebook Comments

Sri Raghav

Admin