ಪ್ರವಾಹದಿಂದ ತತ್ತರಿಸಿದ ಉತ್ತರ ಕರ್ನಾಟಕಕ್ಕೆ 195 ಕೋಟಿ ತುರ್ತು ಪರಿಹಾರ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು. ಆ. 19 : ಉತ್ತರ ಕರ್ನಾಟಕದ ಪ್ರವಾಹಪೀಡಿತ ಜಿಲ್ಲೆಗಳಿಗೆ ರಾಜ್ಯಸರ್ಕಾರದಿಂದ ತುರ್ತಾಗಿ ಒಟ್ಟು 195 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಕೃಷ್ಣ, ಮಲಪ್ರಭಾ, ಘಟಪ್ರಭಾ ನದಿಗಳು ಉಕ್ಕಿ ಹರಿದ ಪರಿಣಾಮವಾಗಿ ಉತ್ತರ ಕರ್ನಾಟಕದ ಮಂದಿ ಭೀಕರ ಪ್ರವಾಹಕ್ಕೆ ಸಿಲುಕಿದ್ದರು. ನೂರಾರು ಗ್ರಾಮಗಳು ನಡುಗಡ್ಡೆಯಲ್ಲಿ ಸಿಲುಕಿದ್ದು, ಸಾವಿರಾರು ಮಂದಿ ನಿರಾಶ್ರಿತರಾದರು. ಇನ್ನು ಈ ಪ್ರವಾಹಕ್ಕೆ 19 ಮಂದಿ ಸಾವನ್ನಪ್ಪಿದ್ದರು.

ಪ್ರವಾಹ ಪರಿಸ್ಥಿತಿ ನಿಭಾಯಿಸಲು, ಪರಿಹಾರ ಕಾರ್ಯಗಳಿಗೆ ಹಾಗೂ ನೆರೆ ಸಂತ್ರಸ್ತರಿಗೆ ಬಟ್ಟೆ ಮತ್ತಿತರ ಅಗತ್ಯ ವಸ್ತುಗಳನ್ನು ನೀಡುವ ಸಲುವಾಗಿ ಅನುದಾನ ನೀಡಲಾಗಿದ್ದು ಜಿಲ್ಲಾಧಿಕಾರಿಗಳಿಗೆ ತಲುಪಿದೆ.

ರಾಜ್ಯ ಸರ್ಕಾರ ನೆರೆ ಪರಿಸ್ಥಿತಿ ನಿರ್ವಹಣೆಗೆ 115 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಜತೆಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ರಾಜ್ಯ ಸರ್ಕಾರದ ಹೆಚ್ಚುವರಿ ಪಾಲಿನ ಅನುದಾನದಿಂದ 80 ಕೋಟಿ ರೂಪಾಯಿ ಮಂಜೂರು ಮಾಡಿದೆ.

ಆಯಾ ಜಿಲ್ಲೆಗಳಿಗೆ ತಲುಪಬೇಕಾದ ಹಣವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಅಲ್ಲದೆ ನೆರೆಯಿಂದ ಹಾನಿಗೊಳಗಾದ ಪ್ರತಿ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಕೊಳ್ಳಲು 10 ಸಾವಿರ ರೂಪಾಯಿ ನೀಡಲು ಸೂಚಿಸಲಾಗಿದೆ.

ಮೊದಲ ಹಂತದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಮೂಲಕ ಕುಟುಂಬಸ್ಥರು ಬಟ್ಟೆ, ದಿನಬಳಕೆ ವಸ್ತುಗಳನ್ನು ಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾವಾರು ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದ್ದು, ಬಾಗಲಕೋಟೆಗೆ – 25 ಕೋಟಿ, ಬೆಳಗಾವಿಗೆ ‌- 45 ಕೋಟಿ, ಧಾರವಾಡ – 1.20 ಕೋಟಿ, ಗದಗ – 8.20 ಕೋಟಿ, ರಾಯಚೂರು – 0.60 ಕೋಟಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

ತುರ್ತು ನಿರ್ವಹಣೆಗೂ ಕೂಡ ಜಿಲ್ಲಾವಾರು ಹಣ ಬಿಡುಗಡೆ ಮಾಡಲಾಗಿದೆ. ಬಾಗಲಕೋಟೆ – 40 ಕೋಟಿ, ಬೆಳಗಾವಿ – 50 ಕೋಟಿ, ಧಾರವಾಡ – 10 ಕೋಟಿ, ಗದಗ – 10 ಕೋಟಿ, ರಾಯಚೂರು – 05 ಕೋಟಿ ಬಿಡುಗಡೆ ಮಾಡಲಾಗಿದೆ .

ಒಟ್ಟಾರೆಯಾಗಿ ಸದ್ಯ ಪ್ರವಾಹ ಪೀಡಿತ 22 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 380 ಕೋಟಿ ಇದ್ದು ಅದರ ಜೊತೆ ರಾಜ್ಯ ಸರ್ಕಾರದಿಂದ ಇದೀಗ 195 ಕೋಟಿಯನ್ನು ಬಿಡುಗಡೆ ಮಾಡಲಾಗಿದ್ದು, ನೆರೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ಇನ್ನು ಪ್ರಾರಂಭಿಕ ಹಂತದಲ್ಲಿ ಉತ್ತರ ಕರ್ನಾಟಕ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಕರಾವಳಿ ಜಿಲ್ಲೆಗೆ ಪರಿಹಾರ ಧನ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

ರಾಜ್ಯದ ಪ್ರವಾಹ ಕುರಿತು ಕಳೆದ ವಾರ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಶೀಲನೆ ನಡೆಸಿದ ಸಿಎಂ ಬಿಎಸ್​ ಯಡಿಯೂರಪ್ಪ ಅಂದಾಜು 40 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದಿದ್ದರು. ಅಲ್ಲದೇ ಈ ಕುರಿತು ಕೇಂದ್ರ ಸರ್ಕಾರಕ್ಕೂ ಪರಿಹಾರ ಹಣ ನೀಡುವಂತೆ ಮನವಿ ಮಾಡಿದ್ದಾರೆ.

ಆದರೆ, ಕೇಂದ್ರದಿಂದ ಇನ್ನು ಯಾವುದೇ ಪರಿಹಾರ ನಿಧಿಯನ್ನು ರಾಜ್ಯಕ್ಕೆ ಘೋಷಣೆ ಮಾಡಿಲ್ಲ. ಕೇಂದ್ರದ ಕ್ರಮವನ್ನು ಖಂಡಿಸಿದ ವಿರೋಧ ಪಕ್ಷಗಳ ನಾಯಕರು, ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದ ಬಿಜೆಪಿ ಸಂಸದರು ಮತ್ತು ಶಾಸಕರು ಮೋದಿ ಎದುರು ನೆರೆ ಪರಿಹಾರ ಕೇಳದೆ ಮೌನಕ್ಕೆ ಶರಣಾಗಿದ್ದಾರೆ ಎಂದು ಟೀಕಿಸಿವೆ.

Facebook Comments

Sri Raghav

Admin