ನಾಪತ್ತೆಯಾಗಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿರಿಕ್ ಕಿಮ್ ದಿಢೀರ್ ಪ್ರತ್ಯಕ್ಷ..!

ಈ ಸುದ್ದಿಯನ್ನು ಶೇರ್ ಮಾಡಿ

ಪೊಯಾಂಗ್‍ಯಾಂಗ್, ಮೇ 2- ತೀವ್ರ ಅನಾರೋಗ್ಯ, ಜೀವನ್ಮರಣ ಹೋರಾಟ ಮತ್ತು ನಿಗೂಢ ಕಣ್ಮರೆ ಸುದ್ದಿಗಳಿಂದಾಗಿ ಭಾರೀ ಚರ್ಚೆಗೆ ಕಾರಣರಾಗಿದ್ದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಕಿಮ್ ಹಠಾತ್ ಪ್ರತ್ಯಕ್ಷರಾಗಿರುವುದರಿಂದ ಎಲ್ಲ ವದಂತಿಗಳು ಮತ್ತು ಊಹಾಪೋಹಾಗಳಿಗೆ ತೆರೆ ಬಿದ್ದಂತಾಗಿದೆ. ಕಳೆದ ಮೂರು ವಾರಗಳಿಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಬಗ್ಗೆ ಕೆಲವು ಸುದ್ದಿಗಳು ವ್ಯಾಪಕವಾಗಿ ಹಬ್ಬಿತ್ತು. ಅವರು ಸರ್ಜರಿಗೆ ಒಳಗಾದ ಬಳಿಕ ಮರಣಶಯ್ಯೆಯಲ್ಲಿದ್ದಾರೆ ಎಂದು ಒಂದು ವರದಿ ಹೇಳಿದ್ದರೆ.

ಅವರು ನಾಪತ್ತೆಯಾಗಿದ್ದಾರೆ ಎಂದು ಇನ್ನೊಂದು ಮೂಲ ತಿಳಿಸಿತ್ತು. ಮತ್ತೊಂದು ಮೂಲ ಏಷ್ಯಾದ ಹಿಟ್ಲರ್ ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು. ಕಿಮ್ ರಾಜಧಾನಿ ಪೊಯಾಂಗ್‍ಯಾನ್‍ನಲ್ಲಿ ನಿನ್ನೆ ನಡೆದ ರಾಸಾಯನಿಕ ಗೊಬ್ಬರ ತಯಾರಿಕೆ ಕಾರ್ಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಕೆಸಿಎಎನ್‍ಎ ವಾರ್ತಾ ಸಂಸ್ಥೆ ಫೋಟೋ ಸಮೇತ ವರದಿ ಪ್ರಕಟಿಸಿದೆ.

ಮೇ 1ರ ಕಾರ್ಮಿಕ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮದಲ್ಲಿ ಕಿಮ್ ಭಾಗವಹಿಸಿ ಗಮನಸೆಳೆದಿದ್ದಾರೆ.ತಮ್ಮ ಸಹೋದರಿ ಕಿಮ್ ಯೋ ಜಾಂಗ್ ಜತೆ ಸುಂಜಾನ್ ಫಾಸ್ಪೆಟಿಕ್ ಫರ್ಟಿಲೈಸರ್ ಕಾರ್ಖಾನೆಯ ರಿಬ್ಬನ್ ಕಟ್ ಸಮಾರಂಭದಲ್ಲಿ ಕಿಮ್ ಪಾಲ್ಗೊಂಡಿದ್ದರು ಎಂಬುದನ್ನು ಉನ್ನತಾಧಿಕಾರಿಗಳೂ ಸಹ ಖಚಿತಪಡಿಸಿದ್ದಾರೆ.

ಕಿಮ್ ಬದುಕಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ನಾಲ್ಕು ದಿನಗಳ ಹಿಂದೆ ವರದಿಯೊಂದು ತಿಳಿಸಿತ್ತು. ಅದರ ಬೆನ್ನಲ್ಲೇ ಈಗ ಉತ್ತರ ಕೊರಿಯಾದ ಡಿಕ್ಟೇಟರ್ ಸಾರ್ವಜನಿಕವಾಗಿ ಪ್ರತ್ಯಕ್ಷರಾಗಿದ್ದಾರೆ.

Facebook Comments

Sri Raghav

Admin