ಉತ್ತರ ಭಾರತದ ವಿವಿಧೆಡೆ ಮಳೆ, ಪ್ರವಾಹಕ್ಕೆ ಸತ್ತವರ ಸಂಖ್ಯೆ 58 ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಶಿಮ್ಲಾ/ನವದೆಹಲಿ/ಚಂಡೀಗಢ, ಆ.20- ಹಿಮಾಚಲ ಪ್ರದೇಶ ಮತ್ತು ಉತ್ತರ ಭಾರತದ ವಿವಿಧೆಡೆ ಭಾರೀ ಮಳೆ ಮತ್ತು ಪ್ರವಾಹದ ರೌದ್ರಾವತಾರ ಮುಂದುವರೆದಿದ್ದು , ಸತ್ತವರ ಸಂಖ್ಯೆ 58ಕ್ಕೆ ಏರಿದೆ. ಈ ಪ್ರಕೃತಿ ವಿಕೋಪದಲ್ಲಿ ಅನೇಕರು ಕಣ್ಮರೆಯಾಗಿದ್ದು , ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತ ರಾಜ್ಯಗಳಲ್ಲಿ ಭಾರೀ ಜಲಗಂಡಾಂತರ ಸೃಷ್ಟಿಸಿ ಸಾವು-ನೋವು, ಆಸ್ತಿ-ಪಾಸ್ತಿಗೆ ಕಾರಣವಾಗಿದ್ದ ಭಾರೀ ಮಳೆ ಮತ್ತು ಭೀಕರ ಪ್ರವಾಹದ ರೌದ್ರಾವತಾರ ಈಗ ಉತ್ತರ ಭಾರತವನ್ನು ನಲುಗುವಂತೆ ಮಾಡಿದೆ.

ಹಿಮಾಚಲ ಪ್ರದೇಶ , ಪಂಜಾಬ್, ಹರಿಯಾಣ, ಉತ್ತರಾಖಂಡ್, ನವದೆಹಲಿ ಮತ್ತು ಉತ್ತರಪ್ರದೇಶ ಈ ಆರು ರಾಜ್ಯಗಳಲ್ಲಿ ನೆರೆ ಹಾವಳಿಯಿಂದ ಒಟ್ಟು 58 ಮಂದಿ ಮೃತಪಟ್ಟಿದ್ದು , ಅನೇಕರು ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಪ್ರವಾಹಕ್ಕೆ ವಿವಿಧ ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು , ನಾಪತ್ತೆಯಾದವರ ರಕ್ಷಣಾ ಕಾರ್ಯ ಮುಂದುವರೆದಿದೆ. ಉತ್ತರಾಖಂಡ , ಪಂಜಾಬ್ , ಹರಿಯಾಣ, ಉತ್ತರಪ್ರದೇಶ, ದೆಹಲಿಗಳಲ್ಲೂ ಮಳೆ ಮತ್ತು ಪ್ರವಾಹದ ಆರ್ಭಟ ಮುಂದುವರೆದಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ದೆಹಲಿಯಲ್ಲಿ ಯಮುನಾ ನದಿ ಪ್ರವಾಹ ಮತ್ತಷ್ಟು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು , ಹೆಲಿಕಾಪ್ಟರ್‍ಗಳು ಮತ್ತು ನೌಕೆಗಳನ್ನು ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧವಾಗಿ ಇಡಲಾಗಿದೆ.ಈ ಮಧ್ಯೆ  ರಾಜಸ್ತಾನದ 13 ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದ ಮಳೆಯಾಗಿದ್ದು , ಕೆಲವೆಡೆ ನೆರೆ ಪರಿಸ್ಥಿತಿ ತಲೆದೋರಿದೆ.

Facebook Comments