ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತರ ನಿರ್ಲಕ್ಷ್ಯ : ಗುಂಡೂರಾವ್ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.16- ಪ್ರವಾಹಪೀಡಿತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸರ್ಕಾರ ತೆರೆದಿರುವ ಪರಿಹಾರ ಕೇಂದ್ರಗಳು ನಿರಾಶ್ರಿತರ ಪಾಲಿಗೆ ನರಕದ ಕೇಂದ್ರಗಳಾಗಿವೆ ಎಂದು ಮಾಜಿ ಸಚಿವ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಸರಿಯಾದ ವ್ಯವಸ್ಥೆಯಿಲ್ಲದೆ, ಊಟ ಉಪಚಾರವಿಲ್ಲದೆ ಪರದಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮನೆಮಠ ಇಲ್ಲದೆ ನೊಂದ ಸಂತ್ರಸ್ತರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುವುದು ಸರಿಯಲ್ಲ. ರಾಜ್ಯ ಸರ್ಕಾರಕ್ಕೆ ಪ್ರವಾಹ ಪರಿಸ್ಥಿತಿ ನಿಭಾಯಿಸುವುದಕ್ಕಿಂತಲೂ ಉಪಚುನಾವಣೆಯೇ ಮುಖ್ಯವಾದಂತಿದೆ. ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸುವ ಕನಿಷ್ಟ ಕಾಳಜಿಯೂ ಸರ್ಕಾರದಿಂದ ಕಾಣಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ತೋರುಗಾಣಿಕೆಯ ಪರಿಹಾರ ಕ್ರಮವನ್ನೇ ದೊಡ್ಡ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದೆ. ನೊಂದ ಜನರ ಶಾಪ ತಟ್ಟುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆರೆಯ ಆಂಧ್ರದಲ್ಲಿ ಸುರಿದ ಮಳೆ ಮತ್ತು ನೆರೆ ಕಾಣಿಸುತ್ತಿದೆ.

ನಮ್ಮ ರಾಜ್ಯದ ಮಳೆ ಪ್ರವಾಹದ ಬಗ್ಗೆ ಪರಿಹಾರವಿರಲಿ ಸೌಜನ್ಯಕ್ಕೂ ಸಾಂತ್ವಾನ ಹೇಳುವ ಮನಸ್ಸು ಅವರಿಗಿಲ್ಲ ಎಂದು ಆರೋಪಿಸಿದ್ದಾರೆ. ಇಷ್ಟಿದ್ದರೂ ರಾಜ್ಯದ ಬಿಜೆಪಿ ಸಂಸದರು ತಮ್ಮ ಸ್ವಾಭಿಮಾನವನ್ನು ಚಿಪ್ಪಿನೊಳಗೆ ಎಳೆದುಕೊಂಡ ಮೃದ್ವಂಗಿಗಳಂತೆ ಜಡವಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

Facebook Comments

Sri Raghav

Admin