ಸದನದ ನಿಂದನೆ : ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ನೋಟೀಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.19- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವರ್ತನೆ ಸದನದ ನಿಂದನೆಯಾಗುತ್ತಿದೆ ಎಂದು ಆರೋಪಿಸಿ ನೋಟಿಸ್ ಕೊಡುವುದಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

ನಿಯಮ-69ರ ಅಡಿ ಸಾರ್ವಜನಿಕ ಮಹತ್ವದ ವಿಚಾರವಾಗಿ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಚಾರದ ಬಗ್ಗೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಮಾಯ್ಯ ಅವರು ಮಂಗಳೂರು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಿರುವ ವಿಚಾರ ಪ್ರಸ್ತಾಪಿಸುತ್ತಿದ್ದಾಗ ಆಕ್ರೋಶಭರಿತರಾಗಿ ಮಾಧುಸ್ವಾಮಿ ಅವರು ನೋಟಿಸ್ ಕೊಡಬೇಕಾಗುತ್ತದೆ ಎಂದು ಹೇಳಿದರು.

ಆಗ ಅಷ್ಟು ಆಕ್ರೋಶಭರಿತರಾಗಿ ಕಾಂಗ್ರೆಸ್ ಸದಸ್ಯರು ಪ್ರತಿ ಆಕ್ಷೇಪ ವ್ಯಕ್ತಪಡಿಸಿದಾಗ ಮಾತಿನ ಚಕಮಕಿ ನಡೆದು ಗೊಂದಲ ಉಂಟಾಯಿತು. ಆಗ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಕೃಷ್ಣರೆಡ್ಡಿ ಸದನದ ಕಾರ್ಯ-ಕಲಾಪಗಳನ್ನು ಕೆಲಕಾಲ ಮುಂದೂಡಿದರು.ಚರ್ಚೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು ಸದನದಲ್ಲಿ ಆಡಳಿತ ಪಕ್ಷದ ಶಾಸಕರು ಪ್ರದರ್ಶಿಸಿದ ಛಾಯಾಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಮಾಧುಸ್ವಾಮಿ ನೀವು ಏನು ಬೇಕಾದರೂ ಮಾತನಾಡಬಹುದೆ ಎಂದು ಪ್ರಶ್ನಿಸಿದರು. ನಿಮ್ಮಷ್ಟು ದೊಡ್ಡವರಲ್ಲ, ಕ್ರಿಯಾಲೋಪದ ವಿಚಾರಕ್ಕೆ ಸಂಬಂಧಿಸಿದಂತೆ ಸಭಾಧ್ಯಕ್ಷರು ತೀರ್ಪು ನೀಡಿದ ನಂತರವೂ ಅದೇ ವಿಚಾರ ಪ್ರಸ್ತಾಪಿಸುತ್ತಿದ್ದೀರಿ. ಕಂಟೆಮ್ಟ್ ಆಫ್ ಹೌಸ್ ನೋಟಿಸ್ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಅವರನ್ನುದ್ದೇಶಿಸಿ ಹೇಳಿದರು.

ಆಗ ಸಿದ್ದರಾಮಯ್ಯ ಎಷ್ಟು ಬಾರಿ ಆಕ್ಷೇಪ ವ್ಯಕ್ತಪಡಿಸ್ತೀರಿ ಎಂದು ಮರು ಪ್ರಶ್ನಿಸಿದರು. ಕಾಂಗ್ರೆಸ್‍ನ ಪ್ರಿಯಾಂಕ ಖರ್ಗೆ ಮಾತನಾಡಿ, ಯಾರಿಗೆ ಹೆದರಿಸುತ್ತೀರಿ. ನೋಟಿಸ್ ಕೊಡುವುದಾದರೆ ಕೊಡಿ ಎಂದರು. ಆಗ ಆಡಳಿತ, ಪ್ರತಿಪಕ್ಷದ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು.

ಆಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರ ಪೀಠದಲ್ಲಿದ್ದ ಕೃಷ್ಣಾರೆಡ್ಡಿ ಅವರು ಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸಿದರು. ಆದರೂ ಸದನದಲ್ಲಿ ಗೊಂದಲದ ವಾತಾವರಣ ಮುಂದುವರಿದಿದ್ದರಿಂದ ಕೆಲಕಾಲ ಸದನವನ್ನು ಮುಂದೂಡಿದರು.

Facebook Comments

Sri Raghav

Admin