ನಟೋರಿಯಸ್ ವಿಕಾಸ್ ದುಬೆಯ ಭಯಾನಕ ಕ್ರೈಂ ಸ್ಟೋರಿ ಗೊತ್ತೇ..!

ಈ ಸುದ್ದಿಯನ್ನು ಶೇರ್ ಮಾಡಿ

ಲಖ್ನೋ,ಜು.10- ಪೊಲೀಸರ ಎನ್ ಕೌಂಟರ್‍ಗೆ ಬಲಿಯಾದ ಕುಖ್ಯಾತ ಪಾತಕಿ ವಿಕಾಸ್ ದುಬೆ ಒಂದು ಕಾಲದಲ್ಲಿ ಸಾಮಾನ್ಯರಂತೆ ಇದ್ದು, ನೋಡು ನೋಡುತ್ತಲೇ ಬಹುಎತ್ತರಕ್ಕೆ ಬೆಳೆದ ಕ್ರಿಮಿ. ಉತ್ತರ ಪ್ರದೇಶದ ಕಾನ್ಪುರದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಬಿಕ್ರೂ ಎಂಬ ಹಳ್ಳಿಯ ವಾಸಿಯಾಗಿರುವ ಈತನ ಹೆಸರು ಕೇಳಿದರೇನೇ ಅಲ್ಲಿಯ ಜನರಲ್ಲಿ ನಡುಕ ಹುಟ್ಟುತ್ತದೆ.

ಅಂಥ ಭಯಾನಕ ನಟೋರಿಯಸ್ ಈತ. ಇದರಿಂದಲೇ ಈತನನ್ನು ಅವನ ಊರಿನಲ್ಲಿ ಬಿಕ್ರೂ ಗಬ್ಬರ್ಸಿಂಗ್ ಎನ್ನುತ್ತಾರೆ. 2001ರಲ್ಲಿ ವಿಕಾಸ್ ದುಬೆ ಹೆಸರು ದೇಶದಲ್ಲಿ ಎಲ್ಲರಿಗೂ ಪರಿಚಿತವಾಯಿತು. ಉತ್ತರ ಪ್ರದೇಶದ ಬಿಜೆಪಿ ನಾಯಕ ಸಂತೋಷ್ ಶುಕ್ಲಾರನ್ನು ದುಬೆ ಹತ್ಯೆ ಮಾಡಿದ್ದ.

ಹತ್ಯೆಯಾಗುವ ಸಮಯದಲ್ಲಿ ಸಂತೋಷ್ ಶುಕ್ಲಾ ಉತ್ತರ ಪ್ರದೇಶದ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ದುಬೆ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಸೆಷನ್ಸ್ ನ್ಯಾಯಾಲಯ ಆತನನ್ನು ಆರೋಪ ಮುಕ್ತ ಎಂದು ಆದೇಶ ನೀಡಿತು.

ರೌಡಿ ವಿಕಾಸ್ ದುಬೆ ವಿರುದ್ಧ ಬೆದರಿಕೆ, ಅಪಹರಣ, ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದೆ. 2000ದಲ್ಲಿ ನಡೆದ ಥಾರಾಚಂದ್ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿ ಬಂದಿತ್ತು.

ಸುಮಾರು 60 ಕ್ರಿಮಿನಲ್ ಪ್ರಕರಣಗಳಲ್ಲಿ ವಿಕಾಸ್ ದುಬೆ ಪೊಲೀಸರಿಗೆ ಬೇಕಾಗಿದ್ದ. ಜೈಲಿನಲ್ಲಿದ್ದಾಗಲೇ ಶಿವರಾಜ್ಪುರ ಪಂಚಾಯತ್ ಚುನಾವಣೆಗೆ ನಿಂತು, ಗೆದ್ದು ಬಂದಿದ್ದ ಈತ ಪ್ರಭಾವಶಾಲಿ ರೌಡಿ. ದರೋಡೆ, ಅಪಹರಣ, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.

ವಿಕಾಸ್ ದುಬೆ ಹಲವು ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ್ದ. 2018ರಲ್ಲಿ ಜೈಲಿನಿಂದಲೇ ಸಂಬಂಧಿಕ ಅನುರಾಗ್ ಹತ್ಯೆಗೆ ಸಂಚು ರೂಪಿಸಿದ್ದ. ಅನುರಾಗ್ ಪತ್ನಿ ವಿಕಾಸ್ ದುಬೆ ಸೇರಿದಂತೆ ನಾಲ್ವರು ವಿರುದ್ಧ ದೂರು ನೀಡಿದ್ದಳು.

2000ದಲ್ಲಿ ನಡೆದ ರಾಮ್ ಬಾಬು ಯಾದವ್ ಹತ್ಯೆ ಪ್ರಕರಣ, 2004ರಲ್ಲಿ ನಡೆದ ದಿನೇಶ್ ದುಬೆ ಹತ್ಯೆ ಪ್ರಕರಣದಲ್ಲಿಯೂ ವಿಕಾಸ್ ದುಬೆ ಹೆಸರು ಕೇಳಿ ಬಂದಿದೆ. ಈ ಹತ್ಯೆಗಳು ನಡೆಯವಾಗ ಜೈಲಿನಲ್ಲಿದ್ದ ವಿಕಾಸ್ ದುಬೆ ಅಲ್ಲಿಂದಲೇ ಸಹಚರರ ಮೂಲಕ ಸಂಚು ರೂಪಿಸಿದ್ದ.  ಹಾಗೆಂದು ಈತನಿಗೆ ಮೊದಲಿನಿಂದಲೂ ಫಿಲ್ಮಿ ಸ್ಟೈಲ್ನಲ್ಲಿ ಅಪರಾಧ ಕೃತ್ಯ ಎಸಗೋದು ಎಂದರೆ ತುಂಬಾ ಖುಷಿಯಂತೆ.

1990ರ ದಶಕದಲ್ಲಿಯೇ ಪಾಪಕೃತ್ಯಕ್ಕೆ ಇಳಿದಿದ್ದ ಈತ ಆಗ ಪ್ರಸಿದ್ಧಿಯಾಗಿದ್ದ ಸನ್ನಿ ಡಿಯೋಲ್ ಅಭಿನಯದ ಅರ್ಜುನ್ ಪಂಡಿತ್ ಚಿತ್ರದಲ್ಲಿನ ಪಂಡಿತ್ ಶಬ್ದ ಮೋಡಿಯೊಳಕ್ಕೆ ಬಿದ್ದು ತನ್ನನ್ನು ಎಲ್ಲರೂ ಅದೇ ರೀತಿ ಕರೆಯುವಂತೆ ತಾಕೀತು ಮಾಡುತ್ತಿದ್ದನಂತೆ. ಈತನ ಊರಲ್ಲಿ ನೀರಿನ ಸಮಸ್ಯೆ ಇತ್ತು, ಈಗಲೂ ಇದೆ. ಆದರೆ ಈತನಿಗೆ ಮೊದಲು ನೀರು ಕೊಟ್ಟ ಬಳಿಕಷ್ಟೇ ಬಾವಿಯಿಂದ ಇತರರು ನೀರು ತೆಗೆದುಕೊಳ್ಳಬೇಕಿತ್ತಂತೆ.

ಒಂದು ವೇಳೆ ಅದನ್ನು ಉಲ್ಲಂಘಿಸಿ ಈತನ ಕಣ್ಣುತಪ್ಪಿಸಿ ಯಾರಾದರೂ ನೀರು ತೆಗೆದುಕೊಂಡರೆ, ಅವರನ್ನು ಮರಕ್ಕೆ ನೇತು ಹಾಕುತ್ತಿದ್ದನಂತೆ. ಊರಿನಲ್ಲಿರುವ ಒಂದೇ ಒಂದು ಬಾವಿಯನ್ನು ತನ್ನದೇ ಎಂದು ಹೇಳಿಕೊಳ್ಳುತ್ತಿದ್ದ ಈತ, ತನಗೆ ಸಂಪೂರ್ಣ ಸಂತೃಪ್ತಿಯಾಗುವವರೆಗೆ ನೀರು ಸಿಕ್ಕ ನಂತರವಷ್ಟೇ ಬೇರೆಯವರು ತೆಗೆದುಕೊಳ್ಳಬೇಕಿತ್ತು ಎನ್ನುತ್ತಾರೆ ಗ್ರಾಮಸ್ಥರು.

ಈತನ ಪತ್ನಿ ರಿಚಾ ಕೂಡ ಅದೇ ಗ್ರಾಮದಲ್ಲಿ ಇದ್ದು, ತನ್ನ ಬಹುತೇಕ ಕುಕೃತ್ಯಗಳ ಬಗ್ಗೆ ಆಕೆಗೆ ಹೇಳುತ್ತಿದ್ದ ಎನ್ನಲಾಗಿದೆ. ಕಳೆದ ವಾರ ಎಂಟು ಮಂದಿ ಪೊಲೀಸರ ಹತ್ಯೆ ಮಾಡುವ ಸಮಯದಲ್ಲಿ ಕೂಡ ಈ ವಿಷಯ ಪತ್ನಿಗೆ ತಿಳಿಸಿದ್ದ ಎನ್ನಲಾಗಿದೆ.

ಇಷ್ಟೆಲ್ಲಾ ಮಾಡುತ್ತಿದ್ದರೂ ಈತ ಮೊದಲು ಎಲ್ಲರ ಗಮನ ಸೆಳೆದದ್ದು 2001ರಲ್ಲಿ ವಿಕಾಸ್ ದುಬೆ ಹತ್ಯೆ ಪ್ರಕರಣದಲ್ಲಿ. ಅದಾದ ಮೇಲೆ 2000ನೇ ಸಾಲಿನಲ್ಲಿ ಥಾರಾಚಂದ್ ಕಾಲೇಜು ಪ್ರಿನ್ಸಿಪಾಲ್ ಮತ್ತು ಸಹಾಯಕ ಮ್ಯಾನೇಜರ್ ಹತ್ಯೆ ಪ್ರಕರಣದಲ್ಲಿ. ಈತನೇ ಕೊಲೆ ಮಾಡಿರುವುದು ತಿಳಿದಿದ್ದರೂ ಸಾಕ್ಷ್ಯಗಳು ಸಿಗದ ಕಾರಣ, ಕೋರ್ಟ್ ಈತನನ್ನು ಎರಡೂ ಪ್ರಕರಣಗಳಿಂದ ಬಿಡುಗಡೆ ಮಾಡಿತ್ತು.

2004ರಲ್ಲಿ ನಡೆದ ದಿನೇಶ್ ದುಬೆ ಹತ್ಯೆ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವುದು ತಿಳಿದಿದ್ದರೂ ಸಾಕ್ಷ್ಯಗಳು ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದ. ನಂತರ ಅದಾದ ಮೇಲೆ ಒಂದೊಂದಾಗಿ ತನ್ನ ಕ್ರಿಮಿನಲ್ ಲೋಕವನ್ನು ವಿಸ್ತಾರ ಮಾಡಿಕೊಳ್ಳತೊಡಗಿದ. ಕೆಲವೊಂದು ವೇಳೆ ಜೈಲಿಗೂ ಹೋಗಿದ್ದ.

Facebook Comments