ದುಬೈನಿಂದ ಬಂದಿದ್ದ ಯುವತಿಯನ್ನು ಬಸ್ ಒಳಗೆ ಬಿಟ್ಟುಕೊಳ್ಳದ ಪ್ರಯಾಣಿಕರು..!
ಅರಕಲಗೂಡು,ಮಾ.21- ವಿದೇಶದಿಂದ ಭಾರತಕ್ಕೆ ಬಂದವರಿಗೆ ಸೀಲ್ ಹಾಕಿರುವ ಹಿನ್ನೆಲೆಯಲ್ಲಿ ಅರಕಲಗೂಡಿನ ಯುವತಿಯೊಬ್ಬರಿಗೆ ಬಸ್ನಲ್ಲಿ ಪ್ರಯಾಣಿಸಲು ಸಹಪ್ರಯಾಣಿಕರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮೊದಲೇ ದೇಶಾದ್ಯಂತ ಕೊರೋನಾ ವೈರಸ್ ಭೀತಿಯಲ್ಲಿರುವ ನಡುವೆಯೇ ಈ ಯುವತಿ ದುಬೈನಿಂದ ವಾಪಸ್ಸಾಗಿರುವ ವಿಷಯ ತಿಳಿದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹಾಸನ ಜಿಲ್ಲೆ ಅರಕಲಗೂಡಿನ ಯುವತಿ ಕಾರ್ಯ ನಿಮಿತ್ತ ದುಬೈಗೆ ತೆರಳಿದ್ದರು. ದುಬೈನಿಂದ ಭಾರತಕ್ಕೆ ವಾಪಸ್ಸಾಗಿರುವ ಇವರಿಗೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿ ಕೈಗೆ ಸೀಲ್ ಹಾಕಿದ್ದಾರೆ.
ಈ ನಡುವೆ ಯುವತಿ ತನ್ನ ಮನೆಗೆ ಹೋಗಲು ಅರಕಲಗೂಡಿನ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತುತ್ತಿದ್ದಂತೆ ಈಕೆ ಕೈ ಮೇಲಿದ್ದ ಸೀಲ್ನ್ನು ಗಮನಿಸಿರುವ ಸಹಪ್ರಯಾಣಿಕರು ಬಸ್ ಹತ್ತದಂತೆ ತಡೆಯೊಡ್ಡಿದರು. ತನಗೆ ಕೊರೋನಾ ಸೊಂಕು ಇಲ್ಲ. ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದೇನೆ.
ನೆಗೆಟಿವ್ ಬಂದಿದೆ ಎಂದು ಯುವತಿ ಹೇಳಿದರಾದರೂ ಅದನ್ನು ಕೇಳುವ ತಾಳ್ಮೆ ಇರಲಿಲ್ಲ. ಈಕೆ ದುಬೈನಿಂದ ಬಂದಿರುವ ವಿಷಯ ತಿಳಿದ ಬಸ್ ಚಾಲಕ ಹಾಗೂ ನಿರ್ವಾಹಕರೂ ಸಹ ಒಂದು ಕ್ಷಣ ಕೊರೋನಾ ಸೋಂಕು ಭೀತಿಯಿಂದ ಆತಂಕಕ್ಕೊಳಗಾದರು.