ಮಲೀನವಾಗುತ್ತಿದೆ ಸ್ವಚ್ಛ ನಗರ ಎನಿಸಿಕೊಂಡಿದ್ದ ಮೈಸೂರು..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಮೇ 21- ಸ್ವಚ್ಛ ನಗರಿ ಹಣೆಪಟ್ಟಿಯ ಸಾಂಸ್ಕøತಿಕ ನಗರಿ ಮೈಸೂರು ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಂತೆ ಮಲಿನ ನಗರಿಯಾಗಿ ಪರಿವರ್ತನೆಯಾಗುತ್ತಿದೆ.

ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ಸುರಿಯುತ್ತಿರುವುದರಿಂದ ಇಡೀ ಪ್ರದೇಶ ಗಬ್ಬೆದ್ದು ಹೋಗಿದೆ. ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮನ ಬಂದಂತೆ ಕೆಲ ಹೊಟೇಲ್‍ಗಳವರು ಕಲ್ಯಾಣಮಂಟಪದವರು, ಕೈಗಾರಿಕೆಗಳವರು ತ್ಯಾಜ್ಯವನ್ನು ತಂದು ಸುರಿದು ಹೋಗುತ್ತಿದ್ದಾರೆ.

ಆರ್‍ಬಿಐ ಪಕ್ಕದಲ್ಲಿರುವ ಚರಂಡಿಗಳಿಗೆ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಮಳೆ ಬಂದರೆ ನೀರಿನಲ್ಲಿ ತ್ಯಾಜ್ಯ ಸೇರಿ ಸಾಂಕ್ರಾಮಿಕ ರೋಗ ಹರಡಲಿದೆ. ಅಲ್ಲದೆ ಕೊಳಕು ನೀರು ರಸ್ತೆಗಳು, ಮನೆಗಳಿಗೆ ನುಗ್ಗಿ ತೊಂದರೆಯಾಗುತ್ತಿದೆ. ಇದಲ್ಲದೆ ಖಾಸಗಿ ನಿವೇಶನಗಳಲ್ಲೂ ತ್ಯಾಜ್ಯ ಸುರಿಯುತ್ತಿದ್ದಾರೆ. ಇದರಿಂದ ಹಲವು ರೀತಿಯ ಸಮಸ್ಯೆ ಎದುರಾಗಲಿದೆ.

ಕೆಲ ತಿಂಗಳ ಹಿಂದೆ ಇದೇ ರೀತಿ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಆಟವಾಡುತ್ತಿದ್ದ ಬಾಲಕ ಮರಳೆಂದು ತಿಳಿದು ಕಾಲಿಟ್ಟಾಗ ಅದು ಕೈಗಾರಿಕಾ ತ್ಯಾಜ್ಯವಾದ್ದರಿಂದ ಸುಟ್ಟು ಹೋಗಿ ಆತ ಸಾವನ್ನಪ್ಪಿದ ತಾಜಾ ಉದಾಹರಣೆ ಇದೆ. ಆದರೂ ಯಾರೂ ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ ಎಂದು ಅವರು ವಿಷಾದಿಸಿದ್ದಾರೆ.

ಕೂರ್ಗಳ್ಳಿ ಗ್ರಾಮ ಪಂಚಾಯಿತಿಯವರು ಕೂಡಾ ಖಾಸಗಿ ನಿವೇಶನಗಳಲ್ಲಿ ತ್ಯಾಜ್ಯ ಹಾಕಿ ಹೋಗುತ್ತಿದ್ದಾರೆ. ಕೈಗಾರಿಕೆಯವರು ತಂದು ಹಾಕುತ್ತಾರೆ. ಇಲ್ಲೂ ಬೆಂಗಳೂರಿನಲ್ಲಿ ಆದಂತಹ ಘಟನೆಗಳು ಸಂಭವಿಸುವುದರಲ್ಲಿ ಸಂಶಯವಿಲ್ಲ.

ಇಷ್ಟೆಲ್ಲಾ ಆದರೂ ಮೈಸೂರು ನಗರ ಪಾಲಿಕೆಯವರು ಎಚ್ಚೆತ್ತುಕೊಂಡಿಲ್ಲ. ಪರಿಸರ ಇಲಾಖೆಯವರು ಪರಿಸರ ಮಲಿನವಾಗುತ್ತಿದ್ದರೂ ಇತ್ತ ಗಮನ ಹರಿಸಿಲ್ಲ ಎಂದು ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್‍ಕುಮಾರ್ ಜೈನ್ ಈ ಸಂಜೆಗೆ ತಿಳಿಸಿದ್ದಾರೆ.

ಹಗಲು ವೇಳೆಯೇ ರಾಜಾರೋಷವಾಗಿ ಕಸ ಸುರಿಯುತ್ತಿದ್ದಾರೆ. ಕೆಲವು ಹೊಟೇಲ್‍ಗಳವರು ಶೌಚಾಲಯದ ವೇಸ್ಟೇಜ್‍ಗಳನ್ನು ತಂದು ಇಲ್ಲಿ ಸುರಿಯುತ್ತಿದ್ದಾರೆ. ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂದಾಗಿದೆ.

ಏನಾದರೂ ಅನಾಹುತ ಸಂಭವಿಸಿದಾಗ ಮನಸಿಗೆ ಬಂದಂತೆ ಹೇಳಿಕೆ ಕೊಡುವ ಬದಲು ಈಗಲೇ ಎಚ್ಚೆತ್ತುಕೊಂಡು ತ್ಯಾಜ್ಯ ಹಾಕುವುದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಜೈನ್ ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin