ತೆರಿಗೆ ಹಣದಲ್ಲಿ ವೈದ್ಯರ ಉನ್ನತಾಭ್ಯಾಸಕ್ಕೆ ಅವಕಾಶ ಬೇಡ: ಎನ್.ಆರ್.ರಮೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.26- ಸಾರ್ವಜನಿಕರ ತೆರಿಗೆ ಹಣದಿಂದ ಎಂಪಿಎಚ್ ಕೋರ್ಸ್ ಮಾಡಲು ತೆರಳುತ್ತಿ ರುವ ಇಬ್ಬರು ಬಿಬಿಎಂಪಿ ವೈದ್ಯರಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಹಾಗೂ ಕಾನೂನು ಬಾಹಿರವಾಗಿ ಇಂತಹ ಕ್ರಮಕ್ಕೆ ಮುಂದಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ದಕ್ಷಣ ವಿಭಾಗದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಬಿಬಿಎಂಪಿ ಆಡಳಿತಾಕಾರಿ ಗೌರವ್ ಗುಪ್ತ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಬಿಬಿಎಂಪಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ರಾಮು ಮತ್ತು ಸಯ್ಯದ್ ಎಂಬುವರು 2016-2017ನೆ ಸಾಲಿನಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ಉದ್ದೇಶದಿಂದ ಪಾಲಿಕೆ ಕೋಟ್ಯಂತರ ಹಣದಲ್ಲಿ ಎಂಡಿ ಕೋರ್ಸ್ ಮಾಡಲು ಕಳುಹಿಸಿಕೊಡಲಾಗಿತ್ತು. ಮೂರು ವರ್ಷಗಳ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ವಾಪಸಾದ ಈ ಇಬ್ಬರು ವೈದ್ಯರು ತಮ್ಮ ವಿದ್ಯಾರ್ಜನೆ ವೇಳೆಯಲ್ಲೂ ಎಲ್ಲಲಾ ರೀತಿಯ ವೇತನ ಮತ್ತು ಭತ್ಯೆಗಳನ್ನು ಪಡೆದುಕೊಂಡಿರುತ್ತಾರೆ.

ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಸ್ನಾತಕೋತ್ತರ ಪದವಿ ಪೂರೈಸಿ ಬಂದಿರುವ ರಾಮು ಮತ್ತು ಸಯ್ಯದ್ ಅವರು ಕಾನೂನಿನ ಪ್ರಕಾರ ಪಾಲಿಕೆಯ ರೆಫರಲ್ ಆಸ್ಪತ್ರೆಗಳಲ್ಲಿ ಫಿಜಿಷಿಯನ್‍ಗಳಾಗಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ ಈ ಇಬ್ಬರು ವೈದ್ಯರು ತಮ್ಮ ರಾಜಕೀಯ ಪ್ರಭಾವ ಬಳಸಿ ಕೆಸಿಎಸ್‍ಆರ್ ನಿಯಮಗಳನ್ನು ಗಾಳಿಗೆ ತೂರಿ ಮತ್ತೊಮ್ಮೆ ಸಾರ್ವಜನಿಕರ ತೆರಿಗೆ ಹಣದ ಮೂಲಕ ಎಂಪಿಎಚ್ ಕೋರ್ಸ್ ಮಾಡಲು ತೆರಳುತ್ತಿದ್ದಾರೆ.

ಈ ಇಬ್ಬರು ವೈದ್ಯರಿಗೆ ಪಾಲಿಕೆ ಆಡಳಿತ ವಿಭಾಗದ ವಿಶೇಷ ಆಯುಕ್ತರು, ಹಣಕಾಸು ವಿಭಾಗದ ಅಕಾರಿಗಳು ಹಾಗೂ ಆರೋಗ್ಯಾಕಾರಿಗಳು ಬೆಂಬಲವಾಗಿ ನಿಂತಿದ್ದಾರೆ. ಹೀಗಾಗಿ ಈ ಕೂಡಲೇ ಈ ಇಬ್ಬರು ವೈದ್ಯರ ಎಂಪಿಎಚ್ ಅಧ್ಯಯನಕ್ಕೆ ತೆರಳುವುದನ್ನು ರದ್ದುಗೊಳಿಸಿ ಅವಶ್ಯಕತೆ ಇರುವ ರೆಫರಲ್ ಮತ್ತು ಡಯಾಲಿಸಿಸ್ ಕೇಂದ್ರಗಳಲ್ಲಿ ಫಿಜಿಶಿಯನ್‍ಗಳಾಗಿ ನಿಯೋಜಿಸಬೇಕು ಎಂದು ಎನ್.ಆರ್.ರಮೇಶ್ ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕ ತೆರಿಗೆ ಹಣದೊಂದಿಗೆ ಚೆಲ್ಲಾಟ ವಾಡುತ್ತಿರುವ ವೈದ್ಯರು ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

Facebook Comments