ಕೋರಮಂಗಲ ಕಣಿವೆ ಅಭಿವೃದ್ಧಿಯಲ್ಲಿ ಅಕ್ರಮ : ಬಿಬಿಎಂಪಿ ಆಡಳಿತಾಧಿಕಾರಿಗೆ ಎನ್.ಆರ್.ರಮೇಶ್ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.15- ಬೃಹತ್ ನೀರುಗಾಲುವೆ ಇಲಾಖೆಗೆ ಸಂಬಂಧಿಸಿದಂತೆ ಕೋರಮಂಗಲ ಕಣಿವೆ ಅಭಿವೃದ್ಧಿ ಕಾಮಗಾರಿಯ 1151 ಕೋಟಿ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪಾಲಿಕೆಯ ಆಡಳಿತಾಧಿಕಾರಿಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ದೂರು ನೀಡಿದ್ದಾರೆ.

ಟೆಂಡರ್ ಷರತ್ತುಗಳಿಗೆ ಸಂಬಂಧಿಸಿದ ಕೆಲವೊಂದು ಅಂಶಗಳಲ್ಲಿ ಅರ್ಹತೆ ಇಲ್ಲದಂತಹ ಪೂರ್ವ ನಿಗದಿತ ಗುತ್ತಿಗೆದಾರನೊಬ್ಬನಿಗೆ ಟೆಂಡರ್ ದೊರಕಿಸಿಕೊಡುವ ಹುನ್ನಾರ ಮಾಡಲಾಗುತ್ತಿದೆ ಎಂದು ಹಣಕಾಸು ಇಲಾಖೆ ಅಪರ ಕಾರ್ಯದರ್ಶಿಗೂ ದಾಖಲೆಗಳ ಸಮೇತ ದೂರನ್ನು ಸಲ್ಲಿಸಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿಯಲ್ಲಿ ಮತ್ತೊಂದು ಕಾರ್ಯಕ್ಕೆ ಬೃಹತ್ ನೀರುಗಾಲುವೆ ಇಲಾಖೆಯ ಅಧಿಕಾರಿಗಳು 151 ಕೋಟಿ ಮೊತ್ತದ ಈ ಕಾಮಗಾರಿಗೆ ಗುತ್ತಿಗೆದಾರನಿಗೆ 17.47ರಷ್ಟು ಹೆಚ್ಚು ಮೊತ್ತವನ್ನು ಪಾವತಿಸಲು ಅಂದರೆ 30 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ಪಾವತಿಸುವ ಕಡತವನ್ನು ನಗರಾಭಿವೃದ್ಧಿ ಇಲಾಖೆಯ ಅನುಮೋದನೆಗೆ ಕಳುಹಿಸಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿರುವ ಅವರು ಟೆಂಡರ್ ಪ್ರಕ್ರಿಯೆ ಕೈ ಬಿಟ್ಟು ಹೊಸ ಟೆಂಡರ್ ಆಹ್ವಾನಿಸಬೇಕೆಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಟೆಂಡರ್ ಮೊತ್ತದ ಶೇ.9ರಷ್ಟು ಹೆಚ್ಚು ಮೊತ್ತವನ್ನು ನಮೂದಿಸಿದ್ದ ಒಂದು ಕಾಮಗಾರಿಯನ್ನು ಹೊರತುಪಡಿಸಿದರೆ ಶೇ.3ಕ್ಕಿಂತಲೂ ಕಡಿಮೆ ಮೊತ್ತವನ್ನು ನಮೂದಿಸಿದ್ದ ಕಾಮಗಾರಿಗಳಿಗೆ ಮಾತ್ರವೇ ಅನುಮೋದನೆ ನೀಡಲಾಗಿದೆ. ಆದರೆ ಈ ಕಾಮಗಾರಿಗೆ ಸಂಬಂಧಿಸಿದಂತೆ ಶೇ.17.47ರಷ್ಟು ಹೆಚ್ಚು ಮೊತ್ತಕ್ಕೆ ಟೆಂಡರ್ ಮೊತ್ತಕ್ಕಿಂತಲೂ ಅಂದರೆ 30 ಕೋಟಿ ರೂ.ಗಳನ್ನು ಆರ್ಥಿಕವಾಗಿ ಗುತ್ತಿಗೆದಾರರಿಗೆ ನೀಡಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಪಾಲಿಕೆ ಆಯುಕ್ತರು ಬಿಡ್‍ದಾರರಾದ ವೆಂಕಟರಮಣಗೌಡ ಎಂಬ ಗುತ್ತಿಗೆದಾರನಿಗೆ ಇಷ್ಟು ಮೊತ್ತಕ್ಕೆ 179.50 ಕೋಟಿಗಳಿಗೆ ಅನುಮೋದನೆ ನೀಡಿ ಸರ್ಕಾರದ ಮುಂದೆ ಮಂಡಿಸಿದ್ದಾರೆ.
ಪಾಲಿಕೆಯ ಬೃಹತ್ ನೀರುಗಾಲುವೆ ಇಲಾಖೆಯ ಮುಖ್ಯ ಅಭಿಯಂತರರು ಎಸ್‍ಡಬ್ಲ್ಯುಡಿ , ಕೋರಮಂಗಲ ಕಣಿವೆ ವಿಭಾಗದ ಕಾರ್ಯಪಾಲಕ ಅಭಿಯಂತರರು ಪೂರ್ವ ನಿರ್ಧಾರಿತ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ನಿಯಮ ಬಾಹಿರ ಕೆಲಸಗಳನ್ನು ಮಾಡಿದ್ದಾರೆ. ಕೂಡಲೇ ಇದನ್ನು ಪರಿಶೀಲಿಸಿ ಟೆಂಡರ್ ಪ್ರಕ್ರಿಯೆಗೆ ಅನುಮೋದನೆ ನೀಡದೆ ಮರು ಟೆಂಡರ್ ಕರೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

Facebook Comments