ಪ್ರಹ್ಲಾದ್‍ಗೆ ನೀಡಿರುವ ಹೆಚ್ಚುವರಿ ಹುದ್ದೆ ರದ್ದುಪಡಿಸಿ : ಎನ್.ಆರ್.ರಮೇಶ್ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.12-ಹಲವಾರು ಹಗರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಒಬ್ಬ ಅಧಿಕಾರಿಗೆ ಐದು ಪ್ರಮುಖ ಇಲಾಖೆಗಳ ಮುಖ್ಯ ಅಭಿಯಂತರ ಹುದ್ದೆಗೆ ನಿಯೋಜನೆ ಮಾಡಿರುವ ಕಾನೂನು ಬಾಹಿರ ಆದೇಶ ವನ್ನು ವಾಪಸ್ ಪಡೆಯಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.

ಈ ಕುರಿತಂತೆ ಅವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಅವರು, ಬಿಬಿಎಂಪಿ ಮುಖ್ಯ ಅಭಿಯಂತರ ಬಿ.ಎಸ್.ಪ್ರಹ್ಲಾದ್ ಅವರಿಗೆ ನೀಡಿರುವ ಹೆಚ್ಚುವರಿ ಹುದ್ದೆಗಳನ್ನು ರದ್ದುಪಡಿಸುವಂತೆ ದೂರು ನೀಡಿದ್ದಾರೆ.

ಪ್ರಹ್ಲಾದ್ ಅವರು ಹಲವಾರು ಗುರುತರ ಆರೋಪಗಳನ್ನು ಎದುರಿಸುತ್ತಿದ್ದರೂ ಅವರಿಗೆ ಐದು ಇಲಾಖೆಗಳ ಹೆಚ್ಚುವರಿ ಜವಬ್ದಾರಿ ನೀಡಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಷ್ಟೆಲ್ಲಾ ಆದರೂ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳು ಪ್ರಹ್ಲಾದ್ ಅವರಿಗೆ ರಸ್ತೆ ಮೂಲಭೂತ ಸೌಕರ್ಯಗಳ ಇಲಾಖೆ, ಮೊದಲನೆ ಹಂತದ ವೈಟ್ ಟಾಪಿಂಗ್ ಕಾಮಗಾರಿಗಳ ಯೋಜನೆ, ಬೃಹತ್ ಮಳೆನೀರುಗಾಲುವೆ , ಸ್ಮಾರ್ಟ್ ಸಿಟಿ ಯೋಜನೆ ಇಲಾಖೆಗಳ ಮುಖ್ಯ ಅಭಿಯಂ ತರರನ್ನಾಗಿ ನಿಯೋಜನೆ ಮಾಡಲಾಗಿದೆ.

ಇದರ ಜತೆಗೆ ಪಾಲಿಕೆಯ ಕೆರೆ ವಿಭಾಗಗಳ ಇಲಾಖೆಗೆ ಆಧಿಕ್ಷಕ ಅಭಿಯಂತರರನ್ನು ನೇಮಕ ಮಾಡಿ ಆ ಇಲಾಖೆಯ ಎಲ್ಲಾ ಕಾರ್ಯಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಪ್ರಹ್ಲಾದ್ ಅವರಿಗೆ ನೀಡಿರುವುದರ ಉದ್ದೇಶವಾದರೂ ಏನು ಎಂದು ರಮೇಶ್ ಪ್ರಶ್ನಿಸಿದ್ದಾರೆ.

ಹಲವಾರು ಗಂಭೀರ ಆರೋಪ ಎದುರಿಸುತ್ತಿರುವ ಪ್ರಹ್ಲಾದ್ ಅವರಿಗೆ ನೀಡಿರುವ ಹೆಚ್ಚುವರಿ ಅಧಿಕಾರವನ್ನು ಈ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Facebook Comments