“150 ಕೋಟಿ ಮೌಲ್ಯದ ಆಸ್ತಿ ಕಬಳಿಕೆಗೆ ಅವಕಾಶ ನೀಡಬೇಡಿ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 26- ವಿಲ್ಸನ್ ಗಾರ್ಡನ್ ರುದ್ರಭೂಮಿ ಮುಂಭಾಗದ 150 ಕೋಟಿ ಬೆಲೆ ಬಾಳುವ 2.03 ಎಕರೆ ಸರ್ಕಾರಿ ಸ್ವತ್ತನ್ನು ಯಾವುದೇ ಕಾರಣಕ್ಕೂ ಚರೀಷ್ಮಾ ಬಿಲ್ಡರ್ಸ್ ಸಂಸ್ಥೆಯವರಿಗೆ ನೀಡಬಾರದು ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ತೋಟಗಾರಿಕೆ ಇಲಾಖೆ ಸಚಿವ ನಾರಾಯಣಗೌಡ ಹಾಗೂ ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತಂತೆ ತೋಟಗಾರಿಕಾ ಸಚಿವರಿಗೆ ಪತ್ರ ಬರೆದಿರುವ ಅವರು, ಸರ್ಕಾರಿ ಸ್ವತ್ತನ್ನು ಖಾಸಗಿ ಸಂಸ್ಥೆ ಹೆಸರಿಗೆ ಖಾತಾ ಮಾಡಲು ಮುಂದಾಗಿರುವ ಕ್ರಮದ ಬಗ್ಗೆ ಎಚ್ಚರ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 150 ಕೋಟಿ ಬೆಲೆ ಬಾಳುವ ಸರ್ಕಾರಿ ಸ್ವತ್ತನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಚರೀಷ್ಮಾ ಬಿಲ್ಡರ್ಸ್‍ನವರು ಬಿಬಿಎಂಪಿ ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಂದರೆ 2017ರಲ್ಲಿ ಮೊದಲ ಬಾರಿಗೆ ಈ ಸ್ವತ್ತಿನ ಖಾತೆಯನ್ನು ನನ್ನ ಹೆಸರಿಗೆ ಮಾಡಿಕೊಡುವಂತೆ ಚರೀಷ್ಮಾ ಬಿಲ್ಡರ್ಸ್‍ನವರು ಅರ್ಜಿ ಸಲ್ಲಿಸಿ ಇನ್ನಿಲ್ಲದ ರಾಜಕೀಯ ಒತ್ತಡ ತಂದಿದ್ದರು. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೋಟ್ಯಂತರ ರೂ. ಮೌಲ್ಯದ ಈ ಸ್ವತ್ತನ್ನು 1980 ರಿಂದಲೂ ಹಾಪ್‍ಕಾಮ್ಸ್ ಸಂಸ್ಥೆ ನೋಡಿಕೊಳ್ಳುತ್ತಿದೆ.

ಈ ಪ್ರದೇಶದಲ್ಲಿ ಹಾಪ್‍ಕಾಮ್ಸ್ ಸಂಸ್ಥೆಯ 17 ಸಾವಿರಕ್ಕೂ ಹೆಚ್ಚು ಸದಸ್ಯ ರೈತರು ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂತಹ ಸ್ವತ್ತಿನ ಮೇಲೆ ಕೆಲವು ಭೂಗಳ್ಳರು ಕಣ್ಣು ಹಾಕಿ ಕೋಟ್ಯಂತರ ಮೌಲ್ಯದ ಸರ್ಕಾರಿ ಆಸ್ತಿ ಕಬಳಿಕೆಗೆ ಹುನ್ನಾರ ನಡೆಸುತ್ತಿದ್ದಾರೆ.

ಬೆಂಗಳೂರು ಉತ್ತರ ತಾಲ್ಲೂಕು ತಹಸೀಲ್ದಾರ್ ಅವರು 2012ರಂದು ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿ ಅಣ್ಣಿಪುರ ಗ್ರಾಮದ ಸರ್ವೆ ನಂ.18ರಲ್ಲಿರುವ 2.03 ಎಕರೆ ಪ್ರದೇಶವು ಸರ್ಕಾರಿ ಇನಾಮು ಜಮೀನಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ ಕೋಟ್ಯಂತರ ಮೌಲ್ಯದ ಸರ್ಕಾರಿ ಭೂಮಿ ನೆಲಗಳ್ಳರ ಪಾಲಾಗದಂತೆ ಎಚ್ಚರಿಕೆ ವಹಿಸುವುದರ ಜತೆಗೆ ಚರೀಷ್ಮಾ ಬಿಲ್ಡರ್ಸ್‍ನವರ ಯಾವುದೇ ಆಮಿಷಕ್ಕೂ ಒಳಗಾಗದೆ ಅಮೂಲ್ಯ ಸ್ವತ್ತನ್ನು ರಕ್ಷಣೆ ಮಾಡಬೇಕು ಎಂದು ಎನ್.ಆರ್.ರಮೇಶ್ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

Facebook Comments