ಆಸ್ತಿ ತೆರಿಗೆ ಹೆಚ್ಚಳ ಮಾಡದಂತೆ ಎನ್.ಆರ್.ರಮೇಶ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.24- ಆಸ್ತಿ ತೆರಿಗೆ ಹೆಚ್ಚಳ ಮಾಡಲು ತೀರ್ಮಾನಿಸಿರುವ ನಿರ್ಣಯವನ್ನು ಕೈ ಬಿಡುವಂತೆ ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಆಡಳಿತಾಧಿಕಾರಿ ಗೌರವ್ ಗುಪ್ತ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಸತಿ ಕಟ್ಟಡಗಳ ಆಸ್ತಿ ತೆರಿಗೆಯನ್ನು ಶೇ.20ರಷ್ಟು ಹಾಗೂ ವಾಣಿಜ್ಯ ಕಟ್ಟಡಗಳ ಆಸ್ತಿ ತೆರಿಗೆ ಯನ್ನು ಶೇ.25ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿರುವುದು ಸರಿಯಾದ ಕ್ರಮವಲ್ಲ.

ಕೂಡಲೇ ಈ ನಿರ್ಣಯವನ್ನು ಕೈ ಬಿಡಬೇಕು ಎಂದು ರಮೇಶ್ ಅವರು ಇಂದು ಗೌರವ ಗುಪ್ತ ಹಾಗೂ ಮಂಜುನಾಥ್ ಪ್ರಸಾದ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದು ಸೂಕ್ತ ಕ್ರಮವಲ್ಲ. ಇದರ ಬದಲು ನಗರದಲ್ಲಿರುವ ಸಾವಿರಾರು ಕಟ್ಟಡಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತಂದಿದ್ದೇ ಆದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಮೇಯವೇ ಬರುವುದಿಲ್ಲ ಎಂದು ಅವರು ಬಿಬಿಎಂಪಿ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ.

ನಗರದಲ್ಲಿ 16 ಲಕ್ಷಕ್ಕೂ ಹೆಚ್ಚು ವಸತಿ ಕಟ್ಟಡಗಳು, 6 ಲಕ್ಷಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳು, 1.10 ಲಕ್ಷ ಕೈಗಾರಿಕಾ ಘಟಕಗಳು, 3800ಕ್ಕೂ ಹೆಚ್ಚು ಖಾಸಗಿ ಶಾಲಾ-ಕಾಲೇಜು ಕಟ್ಟಡಗಳು ,50ಕ್ಕಿಂತ ಹೆಚ್ಚು ಯುನಿಟ್ ಹೊಂದಿರುವ 22,000ಕ್ಕೂ ಹೆಚ್ಚು ವಸತಿ ಸಮುಚ್ಚಯಗಳು , 12,860 ಪಿಜಿ ಹಾಸ್ಟೆಲ್‍ಗಳು , 3,758 ಐಟಿ ಕಂಪೆನಿಗಳು, 94 ಬಿಟಿ ಕಂಪೆನಿಗಳು, 79 ಟೆಕ್ ಪಾರ್ಕ್‍ಗಳು, 157 ಮಾಲ್‍ಗಳು, 2446 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, 3350 ಲಾಡ್ಜ್‍ಗಳು, 684 ಸ್ಟಾರ್ ಹೋಟೇಲ್‍ಗಳು, 1300 ಕಲ್ಯಾಣ ಮಂಟಪಗಳು, 1600 ಪಾರ್ಟಿ ಹಾಲ್‍ಗಳು ಹಾಗೂ 13,860 ಟೆಲಿಕಾಂ ಟವರ್‍ಗಳಿವೆ.

ಇದರ ಸಂಪೂರ್ಣ ದಾಖಲೆಗಳನ್ನು ಆಡಳಿತಾಧಿಕಾರಿಗಳಿಗೆ ನೀಡಿದ್ದು , ಈ ಎಲ್ಲಾ ಕಟ್ಟಡಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತಂದರೆ ಪ್ರತಿ ವರ್ಷ ಕನಿಷ್ಠ 7000 ಕೋಟಿ ರೂ.ಗೂ ಹೆಚ್ಚು ಆಸ್ತಿ ಸಂಗ್ರಹವಾಗಲಿದೆ ಎಂದು ಎನ್.ಆರ್. ರಮೇಶ್ ಸುದ್ದಿಗಾರರಿಗೆ ತಿಳಿಸಿದರು.

ಬಹುತೇಕ ಅಪಾರ್ಟ್‍ಮೆಂಟ್‍ಗಳು ಮತ್ತು ಬೃಹತ್ ಕಟ್ಟಡಗಳು ತಮ್ಮ ಬಿಲ್ಡ್ ಅಪ್ ಏರಿಯಾಗಳ ಬಗ್ಗೆ ತಪ್ಪು ಮಾಹಿತಿ ನೀಡಿವೆ. ಅಂತಹ ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೆ ಮೂಲಕ ಮತ್ತೊಮ್ಮೆ ಅಳತೆ ಮಾಡಿಸಿದರೆ ಅವರ ಬಂಡವಾಳ ಬಯಲಾಗುವುದರ ಜತೆಗೆ ಸಾವಿರಾರು ಕೋಟಿ ತೆರಿಗೆ ಸಂಗ್ರಹ ಮಾಡಬಹುದಾಗಿದೆ.

ಹೀಗಾಗಿ ಕೊರೊನಾ ಸಂಕಷ್ಟದಿಂದ ಈಗಾಗಲೇ ಕಂಗಾಲಾಗಿರುವ ನಗರದ ನಾಗರಿಕರ ಮೇಲೆ ಆಸ್ತಿ ತೆರಿಗೆ ಹೆಚ್ಚಳ ಬರೆ ಹಾಕುವುದನ್ನು ಬಿಟ್ಟು ತೆರಿಗೆ ವಂಚಕರಿಗೆ ಬಿಸಿ ಮುಟ್ಟಿಸುವ ಮೂಲಕ ಮೂರು ಲಕ್ಷಕ್ಕೂ ಹೆಚ್ಚು ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರಲು ಶ್ರಮಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

Facebook Comments