ಅನಧಿಕೃತ ಕಟ್ಟಡ ತೆರವು, ವಲಯ ಆಯುಕ್ತರ ವಿಭಿನ್ನ ಆದೇಶಗಳು ಹಾಸ್ಯಾಸ್ಪದ: ಎನ್.ಆರ್.ರಮೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.7- ನಗರದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಕಟ್ಟಡಗಳ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ವಿಭಿನ್ನವಾದ ಯೋಜನೆಗಳನ್ನು ರೂಪಿಸಿರುವ 8 ವಲಯ ಆಯುಕ್ತರ ನಿಯಮ ಬಾಹಿರ ಆದೇಶಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ನಗರ ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರ ಮುಖೇನ ಒತ್ತಾಯಿಸಿರುವ ಅವರು ಅಕ್ರಮ ಕಟ್ಟಡ ತೆರವುಗೊಳಿಸುವಿಕೆ ಕಾರ್ಯಕ್ಕೆ ಸಂಬಂಧಿಸಿದಂತೆ ವಲಯ ಆಯುಕ್ತರು ನೀಡಿರುವ ವಿಭಿನ್ನ ಆದೇಶಗಳನ್ನು ಕೂಡಲೇ ಹಿಂಪಡೆದು ಜನಪ್ರತಿನಿಧಿಗಳ ಅಧಿಕೃತ ಸಭೆಯಲ್ಲಿ ಆಯುಕ್ತರ ಉಪಸ್ಥಿತಿಯಲ್ಲಿ ಸರ್ವಾನುಮತದಿಂದ ಕೈಗೊಳ್ಳಲಾಗಿರುವ ಪ್ರತ್ಯಾ ಯೋಜನೆಗಳನ್ನು ಹೊರಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನಗರದಲ್ಲಿ ಅಕ್ರಮ ಕಟ್ಟಡಗಳ ಅಥವಾ ಕಟ್ಟಡಗಳ ವ್ಯತಿರಿಕ್ತ ಭಾಗಗಳನ್ನು ತೆರವುಗೊಳಿಸುವ ಸಂಬಂಧ ಸೆಪ್ಟೆಂಬರ್ 2020ರಂದು ನಡೆದ ಬಿಬಿಎಂಪಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಜನಪ್ರತಿನಿಧಿಗಳ ಅಧಿಕೃತ ಸಭೆಯಲ್ಲಿ ತೀರ್ಮಾನವಾದ ವಿಷಯವನ್ನು ಬದಿಗೆ ತಳ್ಳಿ ಅಧಿಕಾರಿಗಳು ಏಕಾಏಕಿ ಒಂದೊಂದು ವಲಯಕ್ಕೆ ಒಂದೊಂದು ರೀತಿಯಾದ ಯೋಜನೆಗಳನ್ನು ರೂಪಿಸಿ ಬಿಬಿಎಂಪಿ ನಗೆಪಾಟಲಿಗೆ ಈಡಾಗುವಂತೆ ಮಾಡಿದ್ದಾರೆ.

ವ್ಯತಿರಿಕ್ತ ಕಟ್ಟಡದ ಭಾಗಗಳನ್ನು ತೆರವುಗೊಳಿಸುವ ಕಾರ್ಯ, ನೋಟೀಸ್ ನೀಡುವ ಕಾರ್ಯ ಮತ್ತು ಆರ್‍ಟಿಐ ಅರ್ಜಿಗಳಿಗೆ ಉತ್ತರಿಸುವ ಕಾರ್ಯವನ್ನು ಸಂಬಂಧಪಟ್ಟ ನಕ್ಷೆ ಮಂಜೂರಾತಿ ಪ್ರಾಧಿಕಾರವೇ ನಿರ್ವಹಿಸಬೇಕು ಎಂದು ಒಂದು ವಲಯ ಆದೇಶ ಹೊರಡಿಸಿದರೆ ಮತ್ತೊಂದು ವಲಯದ ಆಯುಕ್ತರು ಕಟ್ಟಡ ನಿರ್ಮಾಣಕ್ಕೂ ಕಂದಾಯ ಇಲಾಖೆಗೂ ಯಾವುದೇ ಸಂಬಂಧವಿರದಿದ್ದರೂ ಸಹ ಸಂಬಂಧಪಟ್ಟ ವಿಭಾಗದ ಕಂದಾಯ ಅಧಿಕಾರಿಗಳು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಮಾಡಬೇಕೆಂದು ಆದೇಶ ನೀಡಿದ್ದಾರೆ.

ಈ ರೀತಿ ಪರಸ್ಪರ ಸಮನ್ವಯ ಇಲ್ಲದಂತಹ 8 ವಲಯಗಳ ಆಯುಕ್ತರು ವಿಭಿನ್ನ ಆದೇಶಗಳನ್ನು ನೀಡುವ ಮೂಲಕ ನಗೆಪಾಟಲಿಗೆ ಈಡಾಗಿರುವುದು ಅತ್ಯಂತ ಸ್ಪಷ್ಟವಾಗಿದೆ.
ಕೂಡಲೇ ಮುಖ್ಯ ಆಯುಕ್ತರು ಈ ಬಗ್ಗೆ ಗಮನ ಹರಿಸಿ ಈ ವಿಭಿನ್ನ ಆದೇಶಗಳನ್ನು ಹಿಂಪಡೆದು ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳು ಸರ್ವಾನುಮತದಿಂದ ಕೈಗೊಂಡ ನಿರ್ಣಯದ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Facebook Comments