ಗಾಂಧಿನಗರ ಕ್ಷೇತ್ರದಲ್ಲಿ 441 ಕೋಟಿ ರೂ.ಗಳ ಅಕ್ರಮ : ತನಿಖೆಗೆ ಸಿಎಂಗೆ ರಮೇಶ್ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.7- ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಹೆಸರಿನಲ್ಲಿ ನಡೆದಿದೆ ಎನ್ನಲಾದ 441 ಕೋಟಿ ರೂ.ಗಳ ಅಕ್ರಮದ ತನಿಖೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಸಿಬಿ ತನಿಖೆಗೆ ವಹಿಸಿದ್ದಾರೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಗರಣಕ್ಕೆ ಸಂಬಂಧಿಸಿದಂತೆ 494 ಪುಟಗಳ ದಾಖಲೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಸಲ್ಲಿಸಿದ್ದೇನೆ. ದಾಖಲೆಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ಸ್ಥಳದಲ್ಲೇ ಎಸಿಬಿ ತನಿಖೆಗೆ ಆದೇಶಿಸಿದ್ದಾರೆಂದು ತಿಳಿಸಿದರು.

ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ 2015 ರಿಂದ 2020ರ ವರೆಗಿನ ಅವಧಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಬಿಬಿಎಂಪಿ ಅನುದಾನದಲ್ಲಿ ಏಳು ವಾರ್ಡ್‍ಗಳ ಅಭಿವೃದ್ಧಿ ಕಾರ್ಯಕ್ಕೆ ಸುಮಾರು 640 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ. ಈ ಏಳು ವಾರ್ಡ್‍ಗಳನ್ನು ಸುತ್ತುಹಾಕಿದರೂ 150 ಕೋಟಿ ರೂ. ವೆಚ್ಚದ ಕಾಮಗಾರಿ ಮಾಡಿರುವ ಕುರುಹುಗಳು ಸಿಗುತ್ತಿಲ್ಲ ಎಂದರು.

2019 ರಿಂದ ಒಂದೂವರೆ ವರ್ಷದ ಅವಧಿಯಲ್ಲೇ 252 ಕೋಟಿ ಹಣವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿದೆ. ಅದೇ ರೀತಿ 2020ರ ಮೊದಲ ಆರ್ಥಿಕ ಅವಧಿಯಲ್ಲಿ ಇನ್ನೂ 81 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಪಾಲಿಕೆ ಮುಖ್ಯ ಲೆಕ್ಕಾಧಿಕಾರಿಗಳ ಕಚೇರಿ ಅಧಿಕಾರಿಗಳು ದಾಖಲೆ ಬಿಡುಗಡೆ ಮಾಡಿದ್ದಾರೆ. 2015 ರಿಂದ 2019ರ ವರೆಗೆ 306 ಕೋಟಿ ಹಣವನ್ನು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ. ಇಷ್ಟೂ ಹಣವನ್ನು ಕಾಮಗಾರಿ ಮಾಡದೆ ಬಿಡುಗಡೆ ಮಾಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದರು.
ಹಣ ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳನ್ನು ಎಇಇ ಕಚೇರಿಯ ಕಂಪ್ಯೂಟರ್‍ನಿಂದ ಅಳಿಸಿಹಾಕಲಾಗಿದೆ ಎಂದು ಹೇಳಿದರು.

641 ಕೋಟಿ ಮೊತ್ತದ ಪೈಕಿ ಶೇ.75ರಷ್ಟು ಕಾಮಗಾರಿಯು ಕೆಆರ್‍ಐಡಿಎಲ್ ಮೂಲಕ ಮಾಡಬೇಕು. ಆದರೆ, ಭ್ರಷ್ಟ ಬಿಬಿಎಂಪಿ ಅಧಿಕಾರಿಗಳಾದ ಪಾಲಾಕ್ಷಪ್ಪ, ವೆಂಕಟೇಶ್, ರಾಜು ಹಾಗೂ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತರಾಗಿರುವ ಚಿಕ್ಕಹೊನ್ನಯ್ಯ ಅವರೇ ಇಡೀ ಹಗರಣದ ಪ್ರಮುಖ ರೂವಾರಿಗಳೆಂದು ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದರು.

ಚಿಕ್ಕಹೊನ್ನಯ್ಯ ಎಂಬಾತ ಗುತ್ತಿಗೆದಾರ ಪೆಟ್ಟಿಕೋಟ್ ಚಂದ್ರಪ್ಪ ಅವರ ಪರಮಾಪ್ತ. ಹೀಗಾಗಿ ಈ ಹಗರಣದಲ್ಲಿ ಚಂದ್ರಪ್ಪ ಕೂಡ ಪಾಲುದಾರ ಎಂಬುದು ಖಚಿತಪಟ್ಟಿದೆ ಎಂದು ವಿವರಿಸಿದರು. ಕಾಮಗಾರಿ ನಿರ್ವಹಿಸದೆ ಬಿಲ್‍ಗಳನ್ನು ಮಾಡಿಕೊಂಡಿರುವುದು, ಒಂದು ಕಾಮಗಾರಿಗೆ ಎರಡೆರಡು ಬಾರಿ ಹಣ ಬಿಡುಗಡೆ ಮಾಡಿಸಿರುವ ಕಾನೂನು ಬಾಹಿರ ಕೆಲಸಗಳು ಈಗಲೂ ಮುಂದುವರಿದಿವೆ ಎಂದು ತಿಳಿಸಿದರು.

ಈ ಎಲ್ಲ ಅಕ್ರಮಗಳ ಹಿಂದೆ ಶಾಸಕ ದಿನೇಶ್ ಗುಂಡೂರಾವ್ ಅವರ ಕೈವಾಡ ಇರುವ ಶಂಕೆ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಂಬಂಧಪಟ್ಟವರಿಗೆ ಸಲ್ಲಿಸಿದ್ದು, ಉನ್ನತ ಮಟ್ಟದ ತನಿಖೆ ನಂತರ ಸತ್ಯಾಂಶ ಹೊರಬೀಳಲಿದೆ ಎಂದು ರಮೇಶ್ ಹೇಳಿದರು.

Facebook Comments