ಮೀಸಲು ಅರಣ್ಯದಲ್ಲಿ ಉದ್ಯಾನವನ ಬೇಡ : ಎನ್.ಆರ್.ರಮೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.20- ನಗರದಲ್ಲಿ ಲಾಲ್‍ಬಾಗ್, ಕಬ್ಬನ್‍ಪಾರ್ಕ್ ಮಾದರಿಯಲ್ಲಿ ಬೃಹತ್ ಉದ್ಯಾನವನ ನಿರ್ಮಿಸಲು ಮುಂದಾಗಿರುವ ತೋಟಗಾರಿಕಾ ಸಚಿವ ಮುನಿರತ್ನ ಅವರ ನಡೆಗೆ ಬಿಜೆಪಿಯಲ್ಲೇ ಆಕ್ಷೇಪ ವ್ಯಕ್ತವಾಗಿದೆ. ಜಾರಕಬಂಡೆ ಕಾವಲ್‍ನಲ್ಲಿರುವ 644 ಎಕರೆ ಮೀಸಲು ಅರಣ್ಯ ಪ್ರದೇಶದಲ್ಲಿ ಬೃಹತ್ ಉದ್ಯಾನವನ ಸ್ಥಾಪಿಸುವುದು ಬೇಡ ಎಂದು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಅವರಿಗೆ ಪತ್ರ ಬರೆದಿದ್ದಾರೆ.

ಲಾಲ್‍ಬಾಗ್, ಕಬ್ಬನ್‍ಪಾರ್ಕ್ ಸೇರಿದಂತೆ ನಗರದಲ್ಲಿ 1058 ಉದ್ಯಾನವನಗಳಿವೆ. ಇಂತಹ ಸನ್ನಿವೇಶದಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಅತಿದೊಡ್ಡ ಉದ್ಯಾನವನ ಸ್ಥಾಪಿಸಲು ಅವಕಾಶ ನೀಡಬೇಡಿ ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಉದ್ದೇಶಿತ ಉದ್ಯಾನವನ ಸ್ಥಾಪನೆ ಪ್ರದೇಶದಲ್ಲಿ ಜಿಂಕೆ, ನರಿ ಸೇರಿದಂತೆ ನೂರಾರು ವಿಧದ ವನ್ಯಜೀವಿಗಳು ವಾಸ ಮಾಡುತ್ತಿವೆ.

ಅಂತಹ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಿದರೆ ಭಾರೀ ಪ್ರಮಾದ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮೀಸಲು ಅರಣ್ಯ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಿದರೆ ಅಕ್ಕಪಕ್ಕದಲ್ಲಿ ರಿಯಲ್ ಎಸ್ಟೇಟ್ ದಂಧೆ ಆರಂಭವಾಗುವ ಸಾಧ್ಯತೆ ಇರುವುದರಿಂದ ಯಾವುದೇ ಕಾರಣಕ್ಕೂ ಮೀಸಲು ಅರಣ್ಯ ಪ್ರದೇಶದಲ್ಲಿ ಉದ್ಯಾನವನ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಎನ್.ಆರ್.ರಮೇಶ್ ವಿನಂತಿಸಿಕೊಂಡಿದ್ದಾರೆ.

Facebook Comments