ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದೇಕೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.28-ರಾಜ್ಯ ರಾಜಕೀಯದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎನ್.ಆರ್.ಸಂತೋಷ್ ಬಹಳಬೇಸರದಿಂದ ಇದ್ದರು ಎಂದು ಮುಖ್ಯಮಂತ್ರಿ .ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಪತ್ನಿ ಜಾಹ್ನವಿ ಹೇಳಿದ್ದಾರೆ.  ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗಿನಿಂದಲೇ ಅವರು ಸ್ವಲ್ಪ ಬೇಜಾರಾಗಿದ್ದರು.

ಸಂಜೆ ಹೊರಗಡೆ ಹೋಗಿದ್ದರು. ಹೀಗೆ ಹೋದವರು ಸಂಜೆ ಸುಮಾರು 7 ಗಂಟೆಗೆ ಮನೆಗೆ ಬಂದರು. ಓದುತ್ತಾ ಇರುತ್ತೀನಿ ಅಂತ ಮನೆಯ ಮೇಲೆ ಹೋಗಿದ್ದರು ಎಂದರು. ಈ ವೇಳೆ ನಾನು ಊಟಕ್ಕೆ ಏನು ಮಾಡ್ಲಿ ಅಂತ ಕೇಳೋದಕ್ಕೆ ಹೋದೆ. ಆಗ ಅವರು ಸ್ವಲ್ಪ ಬೇಜಾರಲ್ಲಿದ್ದರು. ಅದಾಗಲೇ ಅವರು ಏನು ಮಾತನಾಡುವ ಪರಿಸ್ಥಿತಿಯಲ್ಲಿರಲಿಲ್ಲ.

ಅವರು ಪ್ರಜ್ಞಾ ಕಳೆದುಕೊಳ್ಳುತ್ತಾ ಇದ್ದರು. ಇದರಿಂದ ಗಾಬರಿಗೊಂಡ ನಾವು ಅವರನ್ನು ಅಲ್ಲಿಂದ ಕರೆದುಕೊಂಡು ಬಂದು ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದೆವು ಎಂದು ಹೇಳಿದರು. ರಾಜಕೀಯ ಅಸಮತೋಲನದಿಂದ ಸ್ವಲ್ಪ ಬೇಜಾರಾಗಿದ್ದರು ಅಷ್ಟೆ. ಇನ್ನು ಕೌಟುಂಬಿಕವಾಗಿ ನಾವು ತುಂಬಾನೇ ಚೆನ್ನಾಗಿದ್ದೇವೆ.

ಅಂಥದ್ದೇನೂ ಸಮಸ್ಯೆ ನಮ್ಮ ನಡುವೆ ಇಲ್ಲ. ಮುಕ್ತವಾಗಿ ಮಾತಾಡಿಕೊಂಡು ಎಲ್ಲಾ ರೀತಿಯಲ್ಲೂ ನಾವಿಬ್ಬರೂ ಚೆನ್ನಾಗಿದ್ದೇವೆ. ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡ ಕಾರಣ ಸ್ವಲ್ಪ ಅವರಿಗೆ ಪ್ರಜ್ಞಾ ಇಲ್ಲ. ಆದರೆ ಶೀಘ್ರ ಸರಿಹೋಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಜಾಹ್ನವಿ ಹೇಳಿದ್ದಾರೆ.

ಸಂತೋಷ್ ಅವರು 12 ನಿದ್ರೆ ಮಾತ್ರಗಳನ್ನು ತೆಗೆದುಕೊಂಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಕೆಲ ತಿಂಗಳುಗಳಿಂದ ಸಂತೋಷ್ ಮಾನಸಿಕ ಖಿನ್ನತೆಗೊಳಗಾದವರಂತಿದ್ದರು. ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದೇನೆಂದು ಯಾರೊಂದಿಗೂ ಹೇಳಿಕೊಂಡಿಲ್ಲ.

ಸಂತೋಷ್ ಅವರು ಯಡಿಯೂರಪ್ಪ ಅವರ ಸಹೋದರಿಯ ಮೊಮ್ಮಗನಾಗಿದ್ದು, ಎಬಿವಿಪಿ ಹಾಗೂ ಆರ್‍ಎಸ್‍ಎಸ್‍ನಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಮುರಿದುಬೀಳುತ್ತಿದ್ದಂತೆಯೇ ಬಂಡಾಯ ಶಾಸಕರಿಗೆ ವಿಮಾನಗಳನ್ನು ಬುಕ್ ಮಾಡಿ ಮುಂಬೈ ಹಾಗೂ ದೆಹಲಿಯಲ್ಲಿ ಬಂಡಾಯ ಶಾಸಕರು ತಂಗಲು ಸಂತೋಷ್ ಅವರೇ ವ್ಯವಸ್ಥೆಗಳನ್ನು ಮಾಡಿದ್ದರು.

ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕೆಜೆಪಿ ಪಕ್ಷವನ್ನು ಸ್ಥಾಪನೆ ಮಾಡಲು ಹೊರಟಾಗಲೂ ಸಂತೋಷ್ ಅವರು ಯಡಿಯೂರಪ್ಪ ಅವರೊಂದಿಗಿದ್ದರು. ತಿಪಟೂರಿನ ಕಲ್ಪತರು ತಾಂತ್ರಿಕ ಸಂಸ್ಥೆಯಲ್ಲಿ ಸಂತೋಷ್ ಅವರು ಬಿಇ ಪದವಿ ಪಡೆದಿದ್ದು, ಮೇ.28 ರಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಘಟನೆ ಸಂಬಂಧ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅವರ ರಾಜಕೀಯ ಕಾರ್ಯದರ್ಶಿಯಾಗಿ ಸಂತೋಷ್ ಅವರು ರಾಜ್ಯ ರಾಜಕೀಯದ ತೆರೆಮರೆಯಲ್ಲಿ ಸಾಕಷ್ಟು ಪಾತ್ರ ವಹಿಸಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸುವ ಆಪರೇಷನ್ ಕಮಲದಲ್ಲೂ ಎನ್.ಆರ್. ಸಂತೋಷ್ ಅವರ ಪಾತ್ರವಿದೆ.

ಸಂತೋಷ್ ಅವರು ರಾಜಕೀಯ ವಲಯದಾಚೆ ಸುದ್ದಿಗೆ ಹೆಚ್ಚು ಗ್ರಾಸವಾಗಿದ್ದು ಕೆ.ಎಸ್. ಈಶ್ವರಪ್ಪ ಅವರ ಕಾರ್ಯದರ್ಶಿ ಜೊತೆ ಜಟಾಪಟಿ ಘಟನೆಗಳ ಮೂಲಕ. ಸಂತೋಷ್ ಅವರಿಗೆ ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಕೈತಪ್ಪುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಮನನೊಂದು ಅವರು ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದರಾ ಎಂಬ ಪ್ರಶ್ನೆ ಮೂಡಿದೆ.

Facebook Comments