ದೇಶವ್ಯಾಪಿ ಎನ್‌ಆರ್‌ಸಿ ಜಾರಿ ಬಗ್ಗೆ ನಿರ್ಧಾರ ಆಗಿಲ್ಲ : ಕೇಂದ್ರ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.4-ದೇಶಾದ್ಯಂತ ಕಿಚ್ಚು ಹಚ್ಚಿದ್ದ ಎನ್‌ಆರ್‌ಸಿ  ಬಗ್ಗೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದ್ದು, ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೊಳಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದೆ.

ಲೋಕಸಭೆಯಲ್ಲಿ ಸಂಸದರು ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ನ್ಯಾಷನಲ್ ರಿಜಿಸ್ಟರ್ ಆಫ್ ಇಂಡಿಯನ್ ಸಿಟಿಜನ್ (ಎನ್‍ಆರ್‍ಐಸಿ)ಯನ್ನು ರಾಷ್ಟ್ರವ್ಯಾಪಿ ಜಾರಿಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.

ಈ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಇದೇ ರೀತಿಯ ಗೊಂದಲದ ಹೇಳಿಕೆಗಳು ಕೇಳಿ ಬಂದಿದ್ದವು. ಪ್ರಧಾನಿ ನರೇಂದ್ರ ಮೋದಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಮರ್ಥಿಸಿಕೊಳ್ಳುವ ಸಂದರ್ಭದಲ್ಲಿ ದೇಶಾದ್ಯಂತ ಎನ್‍ಆರ್‍ಸಿ ಜಾರಿಗೊಳಿಸುವ ಯಾವುದೇ ಚರ್ಚೆಗಳಾಗಿಲ್ಲ ಎಂದು ತಿಳಿಸಿದರು.

ಅದೇ ದಿನ ಬೇರೆಡೆ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್‍ಷಾ, ಸಿಎಎ ಮತ್ತು ಎನ್‍ಆರ್‍ಸಿ ಎರಡನ್ನೂ ಜಾರಿಗೊಳಿಸುವುದರಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದರು. ಈಗ ದೆಹಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಎನ್‍ಆರ್‍ಸಿ ಬಗ್ಗೆ ಮತ್ತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದೆ.

Facebook Comments