ಎನ್‍ಎಸ್‍ಎ ವಿಧಿಸುವ ವಿರುದ್ಧದ ಅರ್ಜಿಗೆ ಸುಪ್ರೀಂ ನಕಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.24- ವಿವಾದಿತ ರಾಷ್ಟ್ರೀಯ ಪೌರತ್ವ ತಿದ್ದುಪಡಿ ವಿರುದ್ಧ ದೇಶದ ವಿವಿಧೆಡೆ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‍ಎಸ್‍ಎ) ವಿಧಿಸುವುದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಪೀಠ ಹಿರಿಯ ವಕೀಲ ಎಂ.ಎಲ್. ಶರ್ಮ ಈ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲಿಲ್ಲ.

ಈ ಕುರಿತು ನ್ಯಾಯಾಲಯ ಅಪೂರ್ಣ ತೀರ್ಪು ನೀಡಲು ಸಾಧ್ಯವಿಲ್ಲ. ಈ ಪ್ರಕರಣ ಕುರಿತು ನೀವು ಹೊಸ ಅಥವಾ ಮಧ್ಯಂತರ ಅರ್ಜಿಯನ್ನು ಸಲ್ಲಿಸಿ ಯಾವ ಯಾವ ರಾಜ್ಯಗಳಲ್ಲಿ ಎನ್‍ಎಸ್‍ಎ ನಿಯಮಗಳ ಉಲ್ಲಂಘನೆಯಾಗಿದೆ ಎಂಬ ಬಗ್ಗೆ ನಮಗೆ ತಿಳಿಸಬೇಕು. ಅದಾದ ನಂತರವಷ್ಟೇ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿತು.ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿದಂತೆ ವಿವಿಧೆಡೆ ಸಿಎಎ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿ ಭಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿ ವಿರುದ್ಧ ಶರ್ಮಾ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆಗೆ ಯೋಗ್ಯ ವಲ್ಲ ಎಂಬ ಕಾರಣ ನೀಡಿ ಇದನ್ನು ವಜಾಗೊಳಿಸಲಾಗಿದೆ. ಆದಾಗ್ಯೂ ಇದಕ್ಕೆ ಸಂಬಂಧಿಸಿದ ಸೂಕ್ತ ಮಾಹಿತಿಯೊಂದಿಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Facebook Comments