ಮಂಗಳೂರಿಗೆ ಎನ್‍ಎಸ್‍ಜಿ ತಂಡ, ಚುರುಕುಗೊಂಡ ತನಿಖೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21- ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ನಿನ್ನೆ ಬಾಂಬ್ ಪತ್ತೆಯಾಗಿರುವುದು, ಇತ್ತೀಚೆಗೆ ತಮಿಳುನಾಡಿನ ಪೆÇಲೀಸರು ರಾಜ್ಯದಲ್ಲಿ ಶಂಕಿತ ಉಗ್ರರನ್ನು ಬಂಧಿಸಿರುವುದು ಸೇರಿದಂತೆ ಹಲವಾರು ಭಯೋತ್ಪಾದಕ ಚಟುವಟಿಕೆಗಳು ವ್ಯಾಪಕವಾಗಿರುವುದರಿಂದ ಎನ್‍ಐಎ ಅಧಿಕಾರಿಗಳು ಗಂಭೀರ ಸ್ವರೂಪದ ತನಿಖೆ ನಡೆಸಲು ಮುಂದಾಗಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ ದೇಶವನ್ನೇ ನಡುಗಿಸಿದೆ. ಆಟೋದಲ್ಲಿ ಬಂದು ಧೈರ್ಯವಾಗಿ ಬಾಂಬ್ ಇಟ್ಟು, ಆರೋಪಿ ಪರಾರಿಯಾಗಿರುವುದನ್ನು ನೋಡಿದರೆ ಘಟನೆ ಹಿಂದೆ ದೊಡ್ಡ ಜಾಲವೇ ಭಾಗಿಯಾಗಿರುವ ಅನುಮಾನಗಳು ವ್ಯಕ್ತವಾಗಿವೆ. ರಾಷ್ಟ್ರೀಯ ತನಿಖಾ ದಳ (ಎನ್‍ಐಎ ) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ದಳದ ತಜ್ಞರ ತಂಡ (ಎನ್‍ಎಸ್‍ಜಿ) ಇಂದು ಸ್ಥಳಕ್ಕೆ ಭೇಟಿ ನೀಡಿ ವ್ಯಾಪಕ ಪರಿಶೀಲನೆ ನಡೆಸಿದೆ.

ಬಾಂಬ್ ಇಟ್ಟ ಸ್ಥಳದಿಂದ ಆರಂಭಿಸಿ ಶಂಕಿತ ಆರೋಪಿ ಓಡಾಡಿರ ಬಹುದಾದ ಮಾರ್ಗಗಳು, ಆ ಕ್ಷಣದಲ್ಲಿ ಆ ಸ್ಥಳದಲ್ಲಿ ಕ್ರಿಯಾಶೀಲವಾಗಿದ್ದ ದೂರವಾಣಿ ಸಂಖ್ಯೆಗಳು ಸೇರಿದಂತೆ ಹಲವಾರು ದೃಷ್ಟಿಕೋನಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಎನ್‍ಎಸ್‍ಜಿ ತಂಡ ವಿಮಾನ ನಿಲ್ದಾಣದ ಭದ್ರತೆಯ ವ್ಯವಸ್ಥೆಯನ್ನು ಮರು ಪರಿಶೀಲನೆ ಮಾಡಿದೆ. ಸಿಐಎಸ್‍ಎಫ್ ವಿಮಾನ ನಿಲ್ದಾಣಕ್ಕೆ ಭದ್ರತೆ ನೀಡುತ್ತಿದೆ.

ವ್ಯಾಪಕ ಭದ್ರತೆಯ ನಡುವೆಯೂ ಆರೋಪಿ ಬಾಂಬ್ ಇಟ್ಟು ಹೋಗಿರುವುದರಿಂದ ಭದ್ರತೆಯಲ್ಲಿ ಲೋಪವಿರುವುದು ಸ್ಪಷ್ಟವಾಗಿದ್ದು, ಅದನ್ನು ಸರಿಪಡಿಸಲು ಎನ್‍ಎಸ್‍ಜಿ ತಂಡ ಇಂದು ಮಂಗಳೂರಿಗೆ ಆಗಮಿಸಿ ಸಮಗ್ರ ಪರಿಶೀಲನೆ ನಡೆಸಿದೆ. ಬಾಂಬ್ ಇಟ್ಟು ಪರಾರಿಯಾಗಿರುವ ಆರೋಪಿಯ ಪತ್ತೆಗೆ ಮಂಗಳೂರು ಪೆÇಲೀಸರು ಈಗಾಗಲೇ 3 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈವರೆಗೂ ಕರ್ನಾಟಕದಲ್ಲಿ ಭಯೋತ್ಪಾದನೆಗೆ ಸಂಬಂಧಪಟ್ಟಂತಹ ಗಂಭೀರ ಸ್ವರೂಪದ ಘಟನೆಗಳು ನಡೆದಿರಲಿಲ್ಲ.

ಬೆಂಗಳೂರಿನ ಚರ್ಚ್ ಸ್ಟ್ರೀಟ್, ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ಕೆಲವು ಸ್ಥಳಗಳಲ್ಲಿ ಸಣ್ಣಪುಟ್ಟ ಪ್ರಮಾಣದ ಸ್ಫೋಟಗಳಾಗಿದ್ದವು. ಅದರ ಹಿಂದೆ ಭಯೋತ್ಪಾದಕರಿರುವ ಶಂಕೆಯಿಂದ ತನಿಖೆ ನಡೆದು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಈ ವರ್ಷದ ಆರಂಭದಿಂದ ರಾಜ್ಯದಲ್ಲಿ ಭಯೋತ್ಪಾದನೆಗೆ ಸಂಬಂಧಪಟ್ಟಂತೆ ಆತಂಕಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ.

ತಮಿಳುನಾಡಿನ ಕ್ಯೂ ಬ್ರ್ಯಾಂಚ್ ಪೆÇಲೀಸರು, ಬೆಂಗಳೂರಿನಲ್ಲಿ ಮೂವರು, ಉಡುಪಿಯಲ್ಲಿ ಇಬ್ಬರು ಸೇರಿದಂತೆ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಕರ್ನಾಟಕದಲ್ಲಿ ವಿದ್ರೋಹಿ ಸಂಘಟನೆಯಾಗಿರುವ ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದಕ ಸಂಸ್ಥೆಗೆ ಯುವಕರನ್ನು ನೇಮಕಾತಿ ಮಾಡುವ ಚಟುವಟಿಕೆ ನಡೆಸುತ್ತಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ಸುಮಾರು ಆರು ತಿಂಗಳಿನಿಂದಲೂ ಕರ್ನಾಟಕದಲ್ಲಿ ತಮಿಳುನಾಡು ಮುಸ್ಲಿಂ ಲೀಗ್ ಸಂಘಟನೆಯ ಕಾರ್ಯಕರ್ತರು ಸಕ್ರಿಯರಾಗಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆ ಪ್ರಗತಿಯಲ್ಲಿರುವ ಸಂದರ್ಭದಲ್ಲೇ ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿದೆ. ಮೇಲ್ನೋಟಕ್ಕೆ ಎಲ್ಲವೂ ನಿಯಂತ್ರಣದಲ್ಲಿದೆ, ಆತಂಕಪಡುವ ಅಗತ್ಯ ಇಲ್ಲ ಎಂಬ ಭರವಸೆಗಳು ಸಿಗುತ್ತಿವೆಯಾದರೂ ಒಳಗೊಳಗೇ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿದೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ಯೆ ಮಾಡಲು ಎಸ್‍ಡಿಪಿಐ ಬೆಂಬಲಿತ ಆರು ಮಂದಿ ಕಾರ್ಯಕರ್ತರು ಪ್ರಯತ್ನಿಸಿದ್ದರು ಎಂದು ಖುದ್ದು ನಗರ ಪೆÇಲೀಸ್ ಆಯುಕ್ತರೇ ಹೇಳಿಕೆ ನೀಡಿದ್ದರು. ಹೀಗಾಗಿ ಕರ್ನಾಟಕ ಮೂಲಭೂತವಾದಿ ಉಗ್ರರ ನೆಲೆವೀಡಾಗಿದೆಯೇ? ಎಂಬ ಅನುಮಾನ ಕಾಡಲಾರಂಭಿಸಿದೆ.

ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ಭಾರೀ ಅನಾಹುತಗಳನ್ನು ತಪ್ಪಿಸಲು ಎನ್‍ಐಎ ಮತ್ತು ಎನ್‍ಎಸ್‍ಜಿ ಪಡೆ ಕಾರ್ಯಾಚರಣೆಗಿಳಿದಿದೆ. ವಿಮಾನ ನಿಲ್ದಾಣಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಸೇರಿದಂತೆ ಜನಸಂದಣಿ ಇರುವ ಸ್ಥಳಗಳಿಗೆ ಎನ್‍ಎಸ್‍ಜಿ ತಂಡ ತೆರಳಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲಿದೆ. ರಾಷ್ಟ್ರೀಯ ಮಾನದಂಡದ ಆಧಾರದ ಮೇಲೆ ಭದ್ರತಾ ಕ್ರಮಗಳನ್ನು ಬಿಗಿಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

ಈವರೆಗೂ ಶಾಂತಿಯ ನೆಲೆವೀಡಾಗಿದ್ದ ಕರ್ನಾಟಕದಲ್ಲಿ ಹಂತ ಹಂತವಾಗಿ ಉಗ್ರರ ಕರಿನೆರಳಿನಿಂದ ಉಸಿರುಗಟ್ಟಿಸುವಂತಹ ವಾತಾವರಣ ನಿರ್ಮಾಣವಾಗಲಾರಂಭಿಸಿದೆ. ಜ.26 ರಂದು ಗಣರಾಜ್ಯೋತ್ಸವ ಆಚರಣೆ ವೇಳೆ ಯಾವುದೇ ಅನಾಹುತಗಳಿಗೆ ಅವಕಾಶವಾಗದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ.

Facebook Comments