ಪಾಕ್ ವಿಮಾನ ದುರಂತದಲ್ಲಿ 97 ಪ್ರಯಾಣಿಕರ ಸಾವು, ಪವಾಡ ಸದೃಶ ಪಾರಾದ ಇಬ್ಬರು..!

ಈ ಸುದ್ದಿಯನ್ನು ಶೇರ್ ಮಾಡಿ

ಕರಾಚಿ, ಮೇ 22-ಪಾಕಿಸ್ತಾನದ ಬಂದರು ನಗರಿ ಕರಾಚಿಯ ವಸತಿ ಪ್ರದೇಶದ ಮೇಲೆ ವಿಮಾನ ಪತನಗೊಂಡ ದುರ್ಘಟನೆಯಲ್ಲಿ 97 ಮಂದಿ ಮೃತಪಟ್ಟು, ಇಬ್ಬರು ಪವಾಡ ಸದೃಶ ಪಾರಾಗಿದ್ದಾರೆ.

ಕರಾಚಿಯ ಜಿನ್ಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜನನಿಬಿಡ ವಸತಿ ಪ್ರದೇಶದ ಮೇಲೆ ನಿನ್ನೆ ಸಂಜೆ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್‍ಲೈನ್ಸ್ ವಿಮಾನ ಪತನಗೊಂಡಿತು.

ಈ ವಿಮಾನದಲ್ಲಿ 99 ಮಂದಿ ಇದ್ದರು. ದುರ್ಘಟನೆಯಲ್ಲಿ 97 ಪ್ರಯಾಣಿಕರು ಮೃತಪಟ್ಟಿದ್ದು, ಇಬ್ಬರು ಅಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ ಎಂದು ಹಿರಿಯ ಆರೋಗ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.

ಲಾಹೋರ್‍ನಿಂದ ಬರುತ್ತಿದ್ದ ಪಿಕೆ-83030 ವಿಮಾನವು ಮಲೀರ್ ಪ್ರದೇಶದ ಮಾಡೆಲ್ ಕಾಲೋನಿ ಬಳಿ ಜಿನ್ನಾಗಾರ್ಡನ್ ವಸತಿ ಪ್ರದೇಶದ ಮೇಲೆ ಬಿತ್ತು. ಈ ದುರ್ಘಟನೆಯಲ್ಲಿ ವಸತಿ ಪ್ರದೇಶದ 11 ಮಂದಿಗೆ ತೀವ್ರ ಗಾಯಗಳಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

ಪಾಕಿಸ್ತಾನ ಇಂಟರ್‍ನ್ಯಾಷನಲ್ ಏರ್‍ಲೈನ್ಸ್ ಸಂಸ್ಥೆಯ ಏರ್‍ಬರ್ ಎ-320 ವಿಮಾನದಲ್ಲಿ 91 ಪ್ರಯಾಣಿಕರು ಮತ್ತು ಎಂಟು ಚಾಲನ ಸಿಬ್ಬಂದಿಗಳು ಇದ್ದರು. ಗಾಯಗೊಂಡ ವಸತಿ ಪ್ರದೇಶದ ನಿವಾಸಿಗಳಲ್ಲಿ ಬಹುತೇಕ ಮಹಿಳೆಯರೇ ಆಗಿದ್ದಾರೆ.

ಪವಾಡ ಸದೃಶ ಪಾರಾದವರಲ್ಲಿ ಬ್ಯಾಂಕ್ ಆಫ್ ಪಂಜಾಬ್‍ನ ಅಧ್ಯಕ್ಷ ಜಾಫರ್ ಮಸೂದ್ ಕೂಡ ಒಬ್ಬರು ಎಂದು ಸಿಂಧ್ ಆರೋಗ್ಯ ಸಚಿವ ಅಝ್ರಾ ಪೀಚುಹೋ ತಿಳಿಸಿದ್ದಾರೆ.
ವಿಮಾನ ಪತನ ದುರ್ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin