ಗ್ರಾಮ ಲೆಕ್ಕಿಗ ಹಾಗೂ ತಹಸೀಲ್ದಾರ್ ಯಡವಟ್ಟು, ನೂರಾರು ಅಡಿಕೆ-ತೆಂಗಿನ ಮರಗಳ ಮಾರಣಹೋಮ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಮಾ.9-ಗ್ರಾಮ ಲೆಕ್ಕಿಗ ಹಾಗೂ ತಹಸೀಲ್ದಾರ್ ತಪ್ಪು ತಿಳುವಳಿಕೆಯಿಂದ ಬೆಳೆದು ನಿಂತು ಫಸಲು ಕೊಡುತ್ತಿದ್ದ ನೂರಾರು ಅಡಿಕೆ ಮರಗಳು, 25ಕ್ಕೂ ಹೆಚ್ಚು ತೆಂಗಿನ ಮರಗಳ ಮಾರಣಹೋಮ ನಡೆದಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯ ತಿಪ್ಪೂರಿನಲ್ಲಿ ನಡೆದಿದೆ.

ಇಲ್ಲಿನ ಸರ್ವೆ ನಂ.115ರಲ್ಲಿ ಇರುವ ನಾಲ್ಕು ಎಕರೆ ಜಮೀನಿನಲ್ಲಿ ಕೋಡಿ ಕೆಂಪಮ್ಮ ದೇವಸ್ಥಾನದ ಇನಾಮ್ತಿ ಜಮೀನಿನಲ್ಲಿ ರೈತ ಮಹಿಳೆ ಸಿದ್ದಮ್ಮ ಬೆಳೆದಿದ್ದ ನೂರಾರು ಅಡಿಕೆ ಮರಗಳು, 25ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಜೆಸಿಬಿ ತಂದು ನೆಲಸಮಗೊಳಿಸಿದ ಹೃದಯವಿದ್ರಾವಕ ಘಟನೆಯಿಂದ ಸಿದ್ದಮ್ಮ ಎದೆಬಡಿದುಕೊಂಡು ಅತ್ತು ಅತ್ತು ಮೂರ್ಛೆ ಹೋಗಿದ್ದಾರೆ.

ಕೋಡಿ ಕೆಂಪಮ್ಮ ದೇವರಿಗೆ ಸೇರಿದ ನಾಲ್ಕು ಎಕರೆ ಜಮೀನಿನಲ್ಲಿ ಸಿದ್ದಮ್ಮ ತೆಂಗಿನ ಮರ ಹಾಗೂ ಅಡಿಕೆ ಮರಗಳನ್ನು ಬೆಳೆಸಿದ್ದಲ್ಲದೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಇದರ ನಡುವೆ ಇಲ್ಲಿನ ದೇವಸ್ಥಾನದಲ್ಲಿ ಇರುವ ನಾಲ್ಕು ಜನ ಅರ್ಚಕರು ಹಾಗೂ ಇಲ್ಲಿನ ಗ್ರಾಮಸ್ಥರ ಜೊತೆಗೂಡಿ ಮಾ.12ರಂದು ಗ್ರಾಮದೇವತೆಯ ಜಾತ್ರಾ ಮಹೋತ್ಸವವಿದೆ. ಇದಕ್ಕೆ ಇಲ್ಲಿನ ಜಾಗವನ್ನು ತೆರವುಗೊಳಿಸಿ ಕೊಡಬೇಕೆಂದು ಅರ್ಚಕರು ಹಾಗೂ ಕೆಲವರು ಗ್ರಾಮಸ್ಥರ ಜೊತೆಗೂಡಿ ಜಿಲ್ಲಾಧಿಕಾರಿಗಳಿಗೆ ಮರ ಹಾಗೂ ಇತರೆ ಗಿಡಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರು.

ಅವರ ಮನವಿ ಮೇರೆಗೆ ಜಿಲ್ಲಾಧಿಕಾರಿಗಳು, ಜಾತ್ರಾ ಮಹೋತ್ಸವಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡು ಸುಗಮವಾಗಿ ನಡೆಯಲು ಅನುವು ಮಾಡಿಕೊಡಿ ಎಂದು ತಹಸೀಲ್ದಾರ್ ಮಮತ ಹಾಗೂ ತಿಪ್ಪೂರಿನ ಗ್ರಾಮ ಲೆಕ್ಕಾಧಿಕಾರಿ ಮುರುಳಿ ಅವರಿಗೆ ಸೂಚಿಸಿದ್ದರು.

ಜಿಲ್ಲಾಧಿಕಾರಿ ಅವರು ಕೊಟ್ಟ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡ ಈ ಅಧಿಕಾರಿಗಳು ತಮ್ಮ ಸಿಬ್ಬಂದಿಗಳ ಸಹಕಾರದೊಂದಿಗೆ ನಿನ್ನೆ ಸರ್ವೆ ನಂ.115ರಲ್ಲಿರುವ 175 ಅಡಿಕೆ ಮರ ಹಾಗೂ 25ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಯಂತ್ರಗಳ ಮೂಲಕ ನೆಲಸಮ ಮಾಡಿರುವ ಘಟನೆ ನಡೆದಿದೆ.

ಮಕ್ಕಳಂತೆ ಈ ಮರಗಳನ್ನು ಪೋಷಿಸಿ ಕಣ್ಣೆದುರೆ ಮರಗಳನ್ನು ಕೆಡವಿದ ದೃಶ್ಯಗಳನ್ನು ಕಂಡ ರೈತ ಮಹಿಳೆ ಸಿದ್ದಮ್ಮ ಎದೆ ಬಡಿದುಕೊಂಡು ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಹಿಡಿಶಾಪ ಹಾಕಿದ್ದಾರೆ. ಅಧಿಕಾರಿಗಳ ಈ ಕ್ರಮಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

# ಏನಿದು ವಿವಾದ:
ಇಲ್ಲಿನ ಅರ್ಚಕರು ಹಾಗೂ ರೈತ ಮಹಿಳೆ ಸಿದ್ದಮ್ಮ ನಡುವೆ ಜಮೀನು ವಿಚಾರವಾಗಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಕಳೆದ ವರ್ಷ ಸೇರಿದಂತೆ ಹಲವಾರು ವರ್ಷಗಳಿಂದ ನಿರಂತರವಾಗಿ ಜಾತ್ರಾ ಮಹೋತ್ಸವ ನಡೆದುಕೊಂಡು ಬಂದಿದೆ. ಆದರೆ ದೇವಸ್ಥಾನದ ಅರ್ಚಕರು ಹಾಗೂ ಸಿದ್ದಮ್ಮನ ನಡುವೆ ಇದ್ದ ಮನಸ್ತಾಪದ ಹಿನ್ನೆಲೆಯಲ್ಲಿ ಜಾತ್ರೆಯ ನೆಪದಲ್ಲಿ ಜಮೀನು ಬಿಡಿಸಿಕೊಳ್ಳುವ ಹುನ್ನಾರ ನಡೆಸಿ ಸರ್ಕಾರಿ ಜಮೀನು ದೇವಸ್ಥಾನಕ್ಕೆ ಸೇರಿರುವ ಹಿನ್ನೆಲೆಯಲ್ಲಿ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕು ಹಾಗೂ ಸುಗಮವಾಗಿ ಜಾತ್ರೆ ನಡೆಯಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

ಪರಿಶೀಲನೆ ನಡೆಸಿ ಸುಗಮವಾಗಿ ಜಾತ್ರೆ ಮಾಡಲು ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡ ಈ ಅಧಿಕಾರಿಗಳು ಫಸಲಿಗೆ ಬಂದಿದ್ದ ಮರಗಳನ್ನು ಕಡಿದು ಹಾಕಿದ್ದಾರೆ. ಆದೇಶವನ್ನು ಸಮಗ್ರವಾಗಿ ಪರಿಶೀಲಿಸದೆ ದಿಢೀರ್ ನಿರ್ಧಾರ ಕೈಗೊಂಡು ಮಹಿಳಾ ದಿನಾಚರಣೆಯಂದೇ ರೈತ ಮಹಿಳೆಯನ್ನು ಬೀದಿಪಾಲು ಮಾಡಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಜಮೀನು ವಿವಾದವಿದ್ದರೆ ಅಧಿಕಾರಿಗಳು ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮರಗಳ ಮಾರಣಹೋಮವನ್ನು ತಡೆಯಬಹುದಿತ್ತು. ಮುಜರಾಯಿ ಇಲಾಖೆ ಅಧಿಕಾರಿಗಳು ಜಮೀನಿನಲ್ಲಿರುವ ಮರಗಳನ್ನು ವಶಕ್ಕೆ ತೆಗೆದುಕೊಂಡು ಅದರಲ್ಲಿ ಬರುವ ಆದಾಯವನ್ನು ಸರ್ಕಾರಕ್ಕೆ ಜಮೆ ಮಾಡುವಂತೆ ಸೂಚನೆ ನೀಡಬಹುದಿತ್ತು. ಆದರೆ ಏಕಾಏಕಿ ಈ ರೀತಿ ಮಾಡಿರುವವರ ವಿರುದ್ಧ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು, ಈ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಲ್ಪತರು ನಾಡಿನಲ್ಲೇ ಕಲ್ಪತರು ಮರಗಳ ಮಾರಣಹೋಮ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು , ಜಿಲ್ಲಾಧಿಕಾರಿಗಳು ಭೇಟಿ ನೀಡಿ ಮಹಿಳೆಗೆ ನ್ಯಾಯ ಒದಗಿಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.

Facebook Comments

Sri Raghav

Admin