ಶಾಕಿಂಗ್ : ಬೆಂಗಳೂರಲ್ಲಿ 5 ವರ್ಷ ಅಪಾರ್ಟ್‍ಮೆಂಟ್ ಕಟ್ಟುವಂತಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.27- ಮೂಲಸೌಕರ್ಯಗಳ ಸಮಸ್ಯೆ ಯಿಂದಾಗಿ ಮುಂದಿನ ಐದು ವರ್ಷಗಳವರೆಗೆ ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್‍ಗಳ ನಿರ್ಮಾಣ ವನ್ನು ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಸದಾಶಿವನಗರದ ಬಿಡಿಎ ಕ್ವಾಟ್ರರ್ಸ್‍ನ ಗೃಹ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿ ನಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಕಾವೇರಿ 5ನೇ ಹಂತದ ಯೋಜನೆಯನ್ನು ಜೈಕಾ ಸಂಸ್ಥೆಯ ಹಣಕಾಸು ನೆರವಿನಲ್ಲಿ ಕೈಗೆತ್ತಿಕೊಂಡು ಪೂರ್ಣಗೊಳಿಸಿದರೆ ನಗರಕ್ಕೆ ಹೆಚ್ಚುವರಿಯಾಗಿ 700 ಎಂಎಲ್‍ಡಿ ನೀರು ಸಿಗುತ್ತದೆ. ಆದರೂ ನೀರಿನ ಕೊರತೆ ನೀಗುವುದಿಲ್ಲ ಎಂದು ಹೇಳಿದರು.

ಶರಾವತಿ, ಲಿಂಗನಮಕ್ಕಿಯಿಂದ ನೀರು ತರಲು ಡಿಪಿಎಆರ್ ತಯಾರಿಸಲು ನಾನು ಸೂಚನೆ ನೀಡಿದ್ದೆ. ಅದಕ್ಕೆ ವಿರೋಧ ವ್ಯಕ್ತವಾಗಿದೆ. ಮೇಕೆದಾಟು ನಿರ್ಮಾಣವಾದರೆ ಅಲ್ಲಿಂದ 10 ಟಿಎಂಸಿ ನೀರು ತರಲು ಸಾಧ್ಯವಿದೆ. ಇದೆಲ್ಲ ಆದರೂ ನೀರಿನ ಬವಣೆ ನೀಗುವುದಿಲ್ಲ. ಹಾಗಾಗಿ ಇನ್ನು ಮುಂದೆ ಅಪಾರ್ಟ್‍ಮೆಂಟ್‍ಗಳ ನಿರ್ಮಾಣಕ್ಕೆ ಲೈಸೆನ್ಸ್ ನೀಡದಿರಲು ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ನಗರದಲ್ಲಿ ಈ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳ ಜೊತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ಸಾಕಷ್ಟು ಅಪಾರ್ಟ್‍ಮೆಂಟ್‍ಗಳು ನಿರ್ಮಾಣವಾಗಿದೆ. ಅವುಗಳಲ್ಲಿ ಮಾರಾಟವಾಗದೆ ಸಾಕಷ್ಟು ಫ್ಲಾಟ್‍ಗಳು ಖಾಲಿಯಿವೆ. ಒಂದೆಡೆ 3000 ಫ್ಲಾಟ್‍ಗಳು ನಿರ್ಮಾಣವಾದರೆ ಅಲ್ಲಿ 3000 ವಾಹನಗಳು ಸಂಚರಿಸುತ್ತವೆ. ಅಷ್ಟು ವಾಹನಗಳಿಗೆ ಸಾಕಾಗುವಷ್ಟು ರಸ್ತೆ ನಿರ್ಮಾಣವಾಗಿದೆಯಾ? ಅಷ್ಟೂ ಮಂದಿಗೆ ಕುಡಿಯುವ ನೀರು ಒದಗಿಸಲು ಸಾಮಥ್ರ್ಯ ಇದೆಯಾ, ತ್ಯಾಜ್ಯ ನೀರು ಹೊರಹೋಗಲು ಸೂಕ್ತವಾದ ಚರಂಡಿ ವ್ಯವಸ್ಥೆ ಮಾಡಲಾಗಿದೆಯಾ ಇತ್ಯಾದಿ ಅಂಶಗಳನ್ನು ನಾವು ಪರಿಗಣಿಸಬೇಕಿದೆ.

ಇಷ್ಟು ಸೂಕ್ತ ವ್ಯವಸ್ಥೆಗಳನ್ನು ಮಾಡಲು ಸುಮಾರು ಐದಾರು ವರ್ಷಗಳ ಕಾಲಾವಕಾಶ ಬೇಕು. ಹಾಗಾಗಿ ಅಲ್ಲಿಯವರೆಗೂ ಹೊಸ ಅಪಾರ್ಟ್‍ಮೆಂಟ್‍ಗಳಿಗೆ ಅನುಮತಿ ನೀಡದಿರಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದರು.

ಜನವಸತಿ ಪ್ರದೇಶಗಳಲ್ಲಿ ಅಪಾರ್ಟ್‍ಮೆಂಟ್‍ಗಳ ನಿರ್ಮಾಣಕ್ಕೂ ಬ್ರೇಕ್ ಹಾಕುವ ಚಿಂತನೆ ಇದೆ. ಈಗಾಗಲೇ ನಿರ್ಮಾಣವಾಗಿರುವ ಅಪಾರ್ಟ್‍ಮೆಂಟ್‍ಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸೇರಿದಂತೆ ನಿಯಮಾನುಸಾರ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಬಿಬಿಎಂಪಿಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದೇವೆ ಎಂದು ವಿವರಿಸಿದರು.

# ಸ್ಟೀಲ್‍ಬ್ರಿಡ್ಜ್ ಬದಲಾಗಿ ಸಿಮೆಂಟ್ ಮೇಲ್ಸೇತುವೆ ನಿರ್ಮಾಣ:
ಎಸ್ಟೀಮ್ ಮಾಲ್‍ನಿಂದ ಚಾಲುಕ್ಯ ವೃತ್ತದವರೆಗೂ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡುವ ಯೋಜನೆಯನ್ನು ಈ ಮೊದಲು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು. ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆಗಿನ ಸಿಎಂ ಸಿದ್ದರಾಮಯ್ಯನವರು 2015ರಲ್ಲೇ ಯೋಜನೆಯನ್ನು ರದ್ದುಪಡಿಸಿದ್ದಾರೆ.

ಅದರಂತೆ ನಾವು ಹೈಕೋರ್ಟ್ ವಿಚಾರಣೆ ವೇಳೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದ್ದೇವೆ. ಸ್ಟೀಲ್ ಬ್ರಿಡ್ಜ್ ಬದಲಾಗಿ ಸೀಮೆಂಟ್ ಕಾಂಕ್ರೀಟ್‍ನ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ತಯಾರಿ ನಡೆದಿದೆ.

ಈಗಾಗಲೇ ಎಸ್ಟೀಮ್ ಮಾಲ್‍ನಿಂದ ಬ್ಯಾಪ್ಪಿಸ್ಟ್ ಆಸ್ಪತ್ರೆವರೆಗೂ ಮೇಲ್ಸುತೇವೆ ನಿರ್ಮಾಣಗೊಳ್ಳುತ್ತಿದೆ. ಅದನ್ನು ಮೇಕ್ರಿಸರ್ಕಲ್‍ವರೆಗೂ ವಿಸ್ತರಿಸುವ ಉದ್ದೇಶವಿದೆ. ಚಾಲುಕ್ಯ ವೃತ್ತದವರೆಗೂ ಮೇಲ್ಸೇತುವೆ ವಿಸ್ತರಣೆ ಮಾಡಲು ಸಮಗ್ರ ವರದಿ ತಯಾರಿಕೆಗೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.

ಯೋಜನೆ ಸಿದ್ದಗೊಂಡ ನಂತರ ಸಾಧಕಬಾಧಕಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುವುದು. ಬೆಂಗಳೂರು ದಕ್ಷಿಣದ ಭಾಗದಿಂದ ಕೆಲವರು ಬಂದು ಮೇಲ್ಸೇತುವೆ ರಸ್ತೆ ಬೇಡ ಎಂದು ಪ್ರತಿಭಟನೆ ಮಾಡುತ್ತಾರೆ. ಆದರೆ ಈ ಭಾಗದಲ್ಲಿ ಏರ್ ಪೋರ್ಟ್ , ವಾಯುನೆಲೆ, ದೊಡ್ಡಬಳ್ಳಾಪುರ, ದೇವನಹಳ್ಳಿ ಮಾರ್ಗದಲ್ಲಿ ಸಂಚರಿಸುವವರಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿವೆ.

ಗಂಟೆಗಟ್ಟಲೇ ಸಂಚಾರ ದಟ್ಟಣೆ ಇರುತ್ತದೆ. ದೊಡ್ಡಬಳ್ಳಾಪುರದ ಕೆಲವರು ನನ್ನ ಬಳಿ ಮೇಲ್ಸೇತುವೆ ರಸ್ತೆ ಪರವಾಗಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು. ಪ್ರತಿಭಟನೆಗೆ ಇನ್ನೊಂದು ಪ್ರತಿಭಟನೆಯನ್ನು ಎತ್ತಿಕಟ್ಟುವುದು ಬೇಡ ಎಂದು ನಾನೇ ಸಮಾಧಾನ ಮಾಡಿ ಕಳಿಸಿದೆ ಎಂದರು.

ಈ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಲು ಚಿಂತನೆ ನಡೆಸಿದೆ. ಸಾಧಕ-ಬಾಧಕಗಳ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹೇಳಿಕೊಳ್ಳಬಹುದು ಡಿಸಿಎಂ ಹೇಳಿದರು. ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಕಾರಿಡಾರ್ ನಿರ್ಮಾಣಕ್ಕೆ ಈಗಾಗಲೇ ಡಿಪಿಎಆರ್ ಸಿದ್ಧಗೊಂಡಿದೆ ಶೀಘ್ರದಲ್ಲಿ ಯೋಜನೆ ಕೈಗೆತ್ತಿಕೊಳ್ಳುತ್ತೇವೆ ಎಂದರು.

ಬೆಂಗಳೂರಿನ ವಾಯುಮಾಲಿನ್ಯವನ್ನು ನಿಯಂತ್ರಿಸಲು ಎಲೆಕ್ಟ್ರಿಕ್ ಬಸ್ ಹಾಗೂ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಅದಕ್ಕೆ ಅಗತ್ಯವಾದ ರ್ಜರ್‍ಪಾಯಿಂಟ್‍ಗಳನ್ನು ಎಲ್ಲೆಡೆ ಸ್ಥಾಪಿಸಲು ಬಿಎಂಟಿಸಿ, ಬಿಬಿಎಂಪಿ ಕ್ರಮ ಕೈಗೊಳ್ಳಿವೆ ಎಂದು ಅವರು ಹೇಳಿದರು.

Facebook Comments

Sri Raghav

Admin