ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.8- ಪಂಚಮಸಾಲಿ ಸಮುದಾಯಕ್ಕೆ 2ಎ ಹಾಗೂ ಲಿಂಗಾಯತ ಸಮುದಾಯಗಳಿಗೆ ಕೇಂದ್ರದ ಒಬಿಸಿ ಮೀಸಲಾತಿ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ನಡೆಸುವ ಹೋರಾಟಗಳಿಗೆ ಸರ್ಕಾರದ ನಿರ್ಲ ಕ್ಷ್ಯತೆ ಖಂಡಿಸಿ ಜ.14ರ ಮಕರ ಸಂಕ್ರಾಂತಿ ದಿನದಂದು ಕೂಡಲ ಸಂಗಮದಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಇಂದಿಲ್ಲಿ ಹೇಳಿದರು.

ಲಿಂಗಾಯತ ಸಮುದಾಯದ ಇತಿಹಾಸದಲ್ಲೇ ಇದೊಂದು ಬೃಹತ್ ಪಾದಯಾತ್ರೆಯಾಗಲಿದೆ. ಸುಮಾರು 700 ಕಿ.ಮೀ. ಪಾದಯಾತ್ರೆಯನ್ನು ಸಮುದಾಯದ ಹಕ್ಕೊತ್ತಾಯಗಳಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು. ಬಹುಸಂಖ್ಯಾತ ಲಿಂಗಾಯತ ಸಮುದಾಯದಲ್ಲಿ ಪಂಚಮಸಾಲಿ ಸಮಾಜವು ಕೃಷಿಯನ್ನೇ ನಂಬಿ ಬದುಕುತ್ತಿದೆ. ಶೇ.95ರಷ್ಟು ಬಡವರೇ ಇದ್ದಾರೆ.

ಸಮುದಾಯದ ಸಮಗ್ರ ಅಭಿವೃದ್ಧಿಗೆ 2ಎ ಮೀಸಲಾತಿ ಹಾಗೂ ಎಲ್ಲ ಬಡ ಲಿಂಗಾಯಿತರಿಗೆ ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿ ಕಲ್ಪಿಸಬೇಕು ಎಂದು ಕಳೆದ 20 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಆದರೆ, ಈವರೆಗೆ ನಮ್ಮ ಹೋರಾಟಕ್ಕೆ ಯಾವುದೇ ಫಲ ಸಿಕ್ಕಿಲ್ಲ. ಹಾಗಾಗಿ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಒಂದು ತಿಂಗಳ ಕಾಲ ಬೃಹತ್ ಪಾದಯಾತ್ರೆ ನಡೆಸಲಾಗುವುದು. ಸಮುದಾಯದ ಎಲ್ಲ ಬಾಂಧವರು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಬಂದು ಕೂಡಲ ಸಂಗಮದಲ್ಲಿ ಸೇರಬೇಕೆಂದು ಅವರು ಮನವಿ ಮಾಡಿದರು. ಬೆಂಗಳೂರಿನಲ್ಲಿ ಪಾದಯಾತ್ರೆ ಅಂತ್ಯಗೊಳ್ಳಲಿದ್ದು, ಅಂದು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಹೇಳಿದರು.

2008ರಲ್ಲಿ ಹೋರಾಟವನ್ನು ಪ್ರಾರಂಭಿಸಿ 2012ರಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಯಿತು. ಆದರೂ ಸರ್ಕಾರ ಸ್ಪಂದಿಸಲಿಲ್ಲ. 2020ರ ಅಕ್ಟೋಬರ್ 8ರಂದು ಸುವರ್ಣಸೌಧದ ಮುಂಭಾಗ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಸ್ವತಃ ಸಿಎಂ ದೂರವಾಣಿ ಮೂಲಕ ಸಂಪರ್ಕಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದ್ದರು. ಆದರೆ, ಬೇಡಿಕೆ ಈಡೇರಿಸಲಿಲ್ಲ.

ಡಿಸೆಂಬರ್ 30ರಂದು ರಾಜ್ಯಾದ್ಯಂತ ರಕ್ತದಾನ ಮಾಡುವ ಮೂಲಕ ಹೋರಾಟದ ಕಿಚ್ಚನ್ನು ಹೆಚ್ಚಿಸಿದರೂ ಕೂಡ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಸಮಾಜ ಬಾಂಧವರೊಂದಿಗೆ ಚರ್ಚಿಸಿ ಈ ಪಾದಯಾತ್ರೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಸಿ.ಸಿ.ಪಾಟೀಲ್, ಸಂಸದರಾದ ಕರಡಿ ಸಂಗಣ್ಣ, ಈರಣ್ಣ ಕಡಾಡಿ ನೇತೃತ್ವದ ನಿಯೋಗವನ್ನು ಕೂಡಲ ಸಂಗಮಕ್ಕೆ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ. ಅಷ್ಟರೊಳಗೆ ಸಿಎಂ ಸಂಪುಟ ಸಭೆ ನಡೆಸಿ ಮೀಸಲಾತಿ ಕೊಡುವ ನಿರ್ಣಯ ಕೈಗೊಂಡು ಅದರ ಘೋಷಣಾ ಪತ್ರವನ್ನು ಕಳುಹಿಸಿಕೊಡಬೇಕು. ಹಾಗಾದಾಗ ನಾವು ಹೋರಾಟ ಕೈಬಿಡುತ್ತೇವೆ. ಇಲ್ಲದೆ ಹೋದಲ್ಲಿ ಹೋರಾಟ ಮುಂದುವರಿಸುತ್ತೇವೆ ಎಂದು ಸ್ವಾಮೀಜಿ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ತಪ್ಪುವವರಲ್ಲ. ಭರವಸೆ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ಕಾದು ನೋಡುತ್ತೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ನಾಡಗೌಡ, ಅಖಿಲ ಭಾರತ ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ಡಾ.ವಿಜಯಾನಂದ ಕಾಶಪ್ಪನವರ್, ಯುವ ಘಟಕದ ರಾಜ್ಯಾಧ್ಯಕ್ಷ ಸೋಮಶೇಕರ್ ಅಲ್ಲಾಳ, ಕಿರಣ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

Facebook Comments