ಮುಖ್ಯಮಂತ್ರಿಗಳ ಅಧಿಕೃತ ಗೃಹಕಚೇರಿ ಕೃಷ್ಣಾಗೂ ಕೊರೊನಾ ಭೀತಿ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.19-ಮುಖ್ಯಮಂತ್ರಿಗಳ ಅಧಿಕೃತ ಗೃಹಕಚೇರಿ ಕೃಷ್ಣಾಗೂ ಕೊರೊನಾ ಭೀತಿ ಆವರಿಸಿದೆಯೇ..? ಇಂಥದೊಂದು ಪ್ರಶ್ನೆ ಉದ್ಭವಿಸಲು ಕಾರಣವೆಂದರೆ ಇಂದು ಇದ್ದಕ್ಕಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಕೃಷ್ಣಾದಲ್ಲಿ ನಡೆಯಬೇಕಿದ್ದ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆಸಿರುವುದು ಈ ಅನುಮಾನಗಳಿಗೆ ಪುಷ್ಟಿ ನೀಡುವಂತಿದೆ.

ಅಲ್ಲದೆ ಗೃಹಕಚೇರಿ ಕೃಷ್ಣದಲ್ಲಿ ಇಂದು ಇಡೀ ಕಚೇರಿಯನ್ನು ಸ್ಯಾನಿಟೈಸರ್ ಮೂಲಕ ಸ್ವಚ್ಛಗೊಳಿಸಿ ಸಾರ್ವಜನಿಕರು, ಅಧಿಕಾರಿಗಳು ಸೇರಿದಂತೆ ಯಾರಿಗೂ ಕೂಡ ಪ್ರವೇಶಿಸದಂತೆ ನಿರ್ಬಂಧ ಹಾಕಲಾಗಿತ್ತು.  ಬೆಳಗಿನಿಂದಲೇ ವೈದ್ಯರ ತಂಡ ಆಗಮಿಸಿ ಇಡೀ ಕಚೇರಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಯಾರೊಬ್ಬರನ್ನು ಒಳಗೆ ಬಿಡುತ್ತಿಲ್ಲ.

ಮೂಲಗಳ ಪ್ರಕಾರ ಕೃಷ್ಣಾದಲ್ಲಿರುವ ಮಹಿಳಾ ಪೊಲೀಸ್ ಪೇದೆಯ ಪತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.  ಪತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಮಹಿಳಾ ಪೇದೆಗೂ ಸೊಂಕು ತಗುಲಿರುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಗೃಹಕಚೇರಿಯನ್ನು ಸ್ಯಾನಿಟೈಸರ್ ಮಾಡಿಸಲಾಗಿದೆ.

ಹೀಗಾಗಿ ಇಂದಿನ ಎಲ್ಲ ಕಾರ್ಯಕ್ರಮಗಳನ್ನು ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗಿದೆ. ಇದೀಗ ಗೃಹಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಯೂ ಭಯಭೀತರಾಗಿದ್ದಾರೆ.ಇಲ್ಲಿ ಐಎಎಸ್‍ನಿಂದ ಹಿಡಿದು ಕೆಳಹಂತದ ಅಧಿಕಾರಿಗಳವರೆಗೂ ಕಾರ್ಯ ನಿರ್ವಹಿಸುತ್ತಿದ್ದು, ಮಹಿಳಾ ಪೇದೆಯಿಂದ ಸೋಂಕು ಕಚೇರಿಯ ಇತರೆ ಸಿಬ್ಬಂದಿಗಳು ಆವರಿಸಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಈಗಾಗಲೇ ಕೆಲವು ಸಿಬ್ಬಂದಿಗಳನ್ನು ವೈದ್ಯಕೀಯ ತಪಾಸಣೆ ಗೊಳಪಡಿಸಲಾಗಿದ್ದು, ವರದಿ ಬಂದ ನಂತರ ಯಾರ್ಯಾರಿಗೆ ಸೋಂಕು ಹಬ್ಬಿದೆ ಎಂಬುದು ದೃಢಪಡಲಿದೆ.ಮುನ್ನೆಚ್ಚರಿಕಾ ಕ್ರಮವಾಗಿ ಇನ್ನು ಕೆಲ ದಿನಗಳವರೆಗೆ ಗೃಹಕಚೇರಿ ಕೃಷ್ಣಾವನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಗೃಹಕಚೇರಿ ಕೃಷ್ಣಾಕ್ಕೆ ಹೊಂದಿಕೊಂಡಂತೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಇರುವುದರಿಂದ ಬಹುತೇಕರು ಭಯಭೀತರಾಗಿದ್ದಾರೆ.

Facebook Comments