ಒಕ್ಕಲಿಗರ ಮೀಸಲಾತಿ ಹೋರಾಟಕ್ಕೆ ರಾಜ್ಯಾದ್ಯಂತ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.24- ಒಕ್ಕಲಿಗರಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹೋರಾಟ ರೂಪಿಸುತ್ತಿರುವ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರ ದಲ್ಲಿ ಹಲವು ಸಭೆಗಳನ್ನು ನಡೆಸಿತು.

ಮಾಜಿ ಶಾಸಕ ಹಾಗೂ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಕೆ.ವಿಶ್ವನಾಥ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ, ಹಿರಿಯ ಸಾಹಿತಿ ಎಲ್.ಎನ್. ಮುಕುಂದರಾಜ್, ಪ್ರಕಾಶ್ ಮೂರ್ತಿ, ಧರ್ಮರಾಜ ಕಡಗ, ಅರುಣ್ ಕುಮಾರ್ ಸೇರಿದಂತೆ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್ ಒಕ್ಕಲಿಗ, ಸಮಾಜ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದೆ. ಶೇ.80ರಷ್ಟು ಒಕ್ಕಲಿಗರು ಕೃಷಿಯನ್ನು ಅವಲಂಬಿಸಿದ್ದು, ಆರ್ಥಿಕವಾಗಿ ಸಬಲರಾಗಿಲ್ಲ. ಆದ್ದರಿಂದ ಮೀಸಲಾತಿ ಹೋರಾಟ ಅನಿವಾರ್ಯ ಎಂದರು.

ಸಕಲೇಶಪುರ ಸೇರಿದಂತೆ ಹಾಸನ ಜಿಲ್ಲೆಯಲ್ಲಿ ಒಕ್ಕಲಿಗರನ್ನು ಸಂಘಟಿಸಲಾಗುವುದು. ಮೀಸಲಾತಿ ಹೋರಾಟದ ಅನಿವಾರ್ಯತೆಯನ್ನು ಮನವರಿಕೆ ಮಾಡಿ ಕೊಡಲಾಗುವುದು. ಪಕ್ಷಭೇದ ಮರೆತು ಹೋರಾಟ ಸಮಿತಿಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಸ್ಥಳೀಯ ರೋಟರಿ ಕ್ಲಬ್‍ನಲ್ಲಿಯೂ ಒಕ್ಕಲಿಗ ಮುಖಂಡರ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆದಿಚುಂಚನಗಿರಿ ಮಠಾೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಹೋರಾಟ ನಡೆಸಲಾಗುತ್ತಿದೆ. ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡಬೇಕು. ಆಗ ಮಾತ್ರ ಒಕ್ಕಲಿಗ ಮಕ್ಕಳೂ ಸಹ ಐಐಟಿ, ಐಐಎಂನಂತಹ ಬೃಹತ್ ವಿದ್ಯಾಸಂಸ್ಥೆ ಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹುದ್ದೆಗಳಲ್ಲಿ ಅವಕಾಶ ಪಡೆಯಲು ಅನುಕೂಲವಾಗುತ್ತದೆ ಎಂದರು.

ಸಮಾಜದ ಎಲ್ಲ ಮಠಾೀಶರು ಮತ್ತು ಗಣ್ಯರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ರೂಪಿಸಲಾಗುತ್ತದೆ. ಹೋಬಳಿ ಮಟ್ಟದಿಂದ ಹಿಡಿದು ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು.

ಸ್ಥಳೀಯ ಒಕ್ಕಲಿಗ ಸಮುದಾಯದ ಮುಖಂಡರಾದ ರವಿಕುಮಾರ್, ವಿಜಯ್‍ಕುಮಾರ್, ಮಂಜುನಾಥ್ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಒಕ್ಕಲಿಗರ ಇಂದಿನ ಪರಿಸ್ಥಿತಿ ಮತ್ತು ಸಂಕಷ್ಟದಿಂದ ಹೊರಬರಲು ಮೀಸಲಾತಿ ಅನಿವಾರ್ಯ. ಆದ್ದರಿಂದ ಈ ಹೋರಾಟದಲ್ಲಿ ಭಾಗಿಯಾಗಲು ಒಕ್ಕಲಿಗರಲ್ಲಿ ಅರಿವು ಮೂಡಿಸುವ ಕೆಲಸ ಮಾಡುವುದಾಗಿ ಹೇಳಿದರು.

Facebook Comments

Sri Raghav

Admin