ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ, 500 ಕೋಟಿ ಅನುದಾನ
ಬೆಂಗಳೂರು, ಮಾ.8- ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಹೊಸ ನಿಗಮವನ್ನು ಸ್ಥಾಪಿಸಲಾಗಿದೆ. ನಿಗಮದ ಚಟುವಟಿಕೆಗಳಿಗೆ 500 ಕೋಟಿ ರೂ. ವೆಚ್ಚ ಮಾಡಲು ಯೋಜನೆ ರೂಪಿಸಲಾಗಿದೆ. 2021-22ನೆ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಷಯ ಪ್ರಸ್ತಾಪಿಸಿ ಒಕ್ಕಲಿಗರ ಸರ್ವತೋಮುಖ ಅಭಿವೃದ್ಧಿಗೆ ಹೊಸ ನಿಗಮ ಸ್ಥಾಪಿಸಿರುವುದನ್ನು ಪ್ರಕಟಿಸಿದರು.
ವೀರಶೈಲ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ಹೊಸ ನಿಗಮವನ್ನು ಈಗಾಗಲೇ ಸ್ಥಾಪಿಸಲಾಗಿದೆ. ಇದಕ್ಕೆ 500 ಕೋಟಿ ರೂ.ಗಳ ಅನುದಾನ ನಿಗದಿಪಡಿಸಿದ್ದು, ಇದರಲ್ಲಿ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
[ ಕರ್ನಾಟಕ ಬಜೆಟ್ – 2021 (All Updates) ]
ರಾಜ್ಯದಲ್ಲಿ ಬಡ, ಹಿಂದುಳಿದ, ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. ಈ ಸಮುದಾಯಗಳ ವಿದ್ಯಾರ್ಥಿಗಳು, ಯುವಜನರ ಶಿಕ್ಷಣ ಹಾಗೂ ಸ್ವಾವಲಂಬನೆಗೆ ಬೆಂಬಲ ನೀಡಲು ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ವಿಶ್ವಕಮರ ಸಮುದಾಯಗಳ ಅಭಿವೃದ್ಧಿ, ನಿಗಮ, ಮರಾಠಾ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಿಗೆ ಒಟ್ಟಾರೆ 500 ಕೋಟಿ ರೂ. ಅನುದಾನವನ್ನು ಪ್ರಸಕ್ತ ಸಾಲಿನಲ್ಲಿ ಒದಗಿಸಲಾಗಿದೆ ಎಂದು ಅವರು ಹೇಳಿದರು.