ಸ್ಪೀಕರ್ ಪೀಠದ ಮುಂದೆ ಧರಣಿ ನಡೆಸಿದರೆ ಕ್ರಮ : ಲೋಕಸಭಾಧ್ಯಕ್ಷ ಬಿರ್ಲಾ ಖಡಕ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.19- ಸದನದ ಸ್ಪೀಕರ್ ಪೀಠದ ಮುಂದಿನ ಸ್ಥಳದಲ್ಲಿ ಧರಣಿ ನಡೆಸಿದರೆ ಕ್ರಮ ಕೈಗೊಳ್ಳುವುದಾಗಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಪ್ರತಿಭಟನಾನಿರತ ಪ್ರತಿಪಕ್ಷದ ಸದಸ್ಯರಿಗೆ ಖಡಕ್ ಎಚ್ಚರಿಕೆ ನೀಡಿದ ಪ್ರಸಂಗ ಇಂದು ನಡೆಯಿತು.

ಸಂಸತ್ ಅಧಿವೇಶನದ 2ನೇ ದಿನದ ಕಲಾಪ ಇಂದು ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸದಸ್ಯರು ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಏರಿದ ಧ್ವನಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಧರಣಿ ನಡೆಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ರೈತರ ಸಮಸ್ಯೆಗಳ ಕುರಿತು ಕಲಾಪ ನಡೆಯುತ್ತಿದ್ದ ವೇಳೆ 20ಕ್ಕೂ ಹೆಚ್ಚು ಕಾಂಗ್ರೆಸ್ ಸದಸ್ಯರು ಮತ್ತು ವಿವಿಧ ಪಕ್ಷಗಳ ಸಂಸದರು ಧರಣಿ ನಡೆಸುತ್ತಿದ್ದಾಗ ಅವರ ವರ್ತನೆಗೆ ಸ್ಪೀಕರ್ ಕೆಂಡಮಂಡಲವಾದರು.  ನಿಮ್ಮ ಆಸನಗಳಿಗೆ ಹಿಂದಿರುಗಿದರೆ ರೈತರ ಸಮಸ್ಯೆಗಳ ಕುರಿತು ಪೂರಕ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡುವುದಾಗಿ ಧರಣಿನಿರತ ಪ್ರತಿಪಕ್ಷಗಳ ಸದಸ್ಯರಿಗೆ ತಿಳಿಸಿದರು. ಆದರೆ ಇದಕ್ಕೆ ಕಿವಿಗೊಡದ ಸದಸ್ಯರು ಪ್ರತಿಭಟನೆ ಮುಂದುವರೆಸಿದರು.

ಇಂಥ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಇನ್ನು ಮುಂದೆ ಸಭಾಧ್ಯಕ್ಷರ ಪೀಠದ ಮುಂದಿನ ಸ್ಥಳದಲ್ಲಿ (ಬಾವಿ) ಧರಣಿ ನಡೆಸುವ ಸದಸ್ಯರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಓಂ ಬಿರ್ಲಾ ಗುಡುಗಿದರು.  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರಿಗೆ ಎಸ್‍ಪಿಜಿ ಭದ್ರತೆ ವಾಪಸ್ ಪಡೆದಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಧರಣಿ ನಡೆಸಿದರೆ ಕಾಶ್ಮೀರದಲ್ಲಿ ವಿವಿಧ ಪಕ್ಷಗಳ ನಾಯಕರ ಗೃಹಬಂಧನದ ವಿರುದ್ಧ ನ್ಯಾಷನಲ್ ಕಾನ್ಫರೆನ್ಸ್ ಪ್ರತಿಭಟನೆ ನಡೆಸಿತು.

ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿ ಪ್ರಹಾರ ಮತ್ತು ಬಂಧನ ಹಾಗೂ ಮದರಾಸ್ ಐಐಟಿ ವಿದ್ಯಾರ್ಥಿನಿ ಫಾತಿಮಾ ಆತ್ಮಹತ್ಯೆ ಪ್ರಕರಣಗಳನ್ನು ಡಿಎಂಕೆ ಪ್ರಸ್ತಾಪಿಸಿ ಧರಣಿ ನಡೆಸಿತು.

Facebook Comments