`ಓಂ’ ಸಿಲ್ವರ್ ಜ್ಯೂಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಓಂ ಚಿತ್ರಕ್ಕೆ ಓಂಕಾರ ಬರೆದಿದ್ದೇ ಅಣ್ಣಾವ್ರು… ನಿರ್ದೇಶಕ ಉಪೇಂದ್ರ ಹೇಳಿದ ಸ್ಕ್ರಿಪ್ಟ್ ಅನ್ನು ಅಣ್ಣಾವ್ರು ಹಾಗೂ ವರದಪ್ಪನವರಿಗೆ ಕೇಳಿದ ಕೂಡಲೇ ಓಕೆ ಎಂದು ಸ್ಕ್ರಿಪ್ಟ್‍ನ ಮೊದಲ ಪುಟದ ಮೇಲೆ ಡಾ.ರಾಜ್‍ಕುಮಾರ್‍ರವರು ಓಂ ಎಂದು ಬರೆದಿದ್ದರಂತೆ. ಅದನ್ನು ಗಮನಿಸಿದಂತಹ ಉಪೇಂದ್ರ ಇದಕ್ಕೆ ಓಂ ಎನ್ನುವ ಶೀರ್ಷಿಕೆ ಸೂಕ್ತ ಎಂದು ನಿರ್ಧರಿಸಿ ಸಿಂಗಲ್ ಟೈಟಲ್ ಓಂಗೆ ನಾಂದಿ ಹಾಡಿದರು.

ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಚಿತ್ರ ಓಂ ಬಿಡುಗಡೆಯಾಗಿ 25 ವರ್ಷಗಳಾಗಿದೆ. ಈ ಚಿತ್ರದ ಆರಂಭದ ಸಮಯದಲ್ಲಿ ಒಂದಷ್ಟು ಸ್ವಾರಸ್ಯಕರ ಘಟನೆಗಳೂ ಸಹ ನಡೆದಿವೆ, ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಹಿನ್ನೆಲೆಯ ಕತೆಗಳು ಜನಪ್ರಿಯವಾಗಲು ಹಾಗೂ ಒಂದು ಕಥೆ ಹೇಳುವ ತಂತ್ರ ಬದಲಾಗಲು ಈ ಚಿತ್ರ ಮುಖ್ಯ ಕಾರಣವಾಯಿತು.

ಅಲ್ಲದೆ ಹಲವು ಹೊಸತನಗಳಿಗೆ ನಾಂದಿಯಾಯಿತು. ಶಿವರಾಜ್‍ಕುಮಾರ್ ಅವರಿಗಂತೂ ಹೊಸ ಮ್ಯಾನರಿಸಂಅನ್ನೇ ನೀಡಿಬಿಟ್ಟಿತು. ಓಂ ನಿಂದ ಪ್ರಾರಂಭವಾದ ಶಿವಣ್ಣ ಅವರ ರಗಡ್ ಲುಕ್ ಈಗಲೂ ಅವರನ್ನು ಬಿಟ್ಟು ಹೋಗಿಲ್ಲ. ಶಿವರಾಜ್‍ಕುಮಾರ್ ಅವರ ವೃತ್ತಿ ಜೀವನದಲ್ಲೇ ದೊಡ್ಡ ಹಿಟ್ ಕೊಟ್ಟ ಓಂ ಸಿನಿಮಾದ ನಾಯಕ ಸತ್ಯನ ಪಾತ್ರಕ್ಕೆ ಜೀವ ತುಂಬಿದ ನಟ ಶಿವಣ್ಣ.

ತರ್ಲೆನನ್ಮಗ ಹಾಗೂ ಶ್..! ಚಿತ್ರ ನಿರ್ದೇಶಿಸಿದ ಉಪೇಂದ್ರ ತನ್ನ ಆತ್ಮೀಯ ಗೆಳೆಯ ಸತ್ಯನ ನಿಜ ಜೀವನದ ಕಥೆಯನ್ನ ಆಯ್ಕೆ ಮಾಡಿಕೊಂಡು ಅದಕ್ಕೆ ರೌಡಿಸಂ ಲೇಪನವನ್ನು ಸಿದ್ಧಪಡಿಸಿಕೊಂಡು ಒಂದು ಹೊಸತನದ ಚಿತ್ರ ನೀಡುವ ಹಂಬಲದಲ್ಲಿ ನಿರತವಾಗಿದ್ದರು.

ಇದೇ ಸಮಯಕ್ಕೆ ಅಣ್ಣಾವ್ರ ಮನೆಯಲ್ಲಿ ಒಬ್ಬರಂತೆ ಗುರುತಿಸಿಕೊಂಡಿದ್ದ ಹೊನ್ನವಳ್ಳಿ ಕೃಷ್ಣ ಹಾಗೂ ಛಾಯಾಗ್ರಾಹಕ ಗೌರಿಶಂಕರ್ ಅವರು ಉಪ್ಪಿಯ ಕಾರ್ಯವೈಖರಿ ಹಾಗೂ ಆಸಕ್ತಿಯನ್ನು ಕಂಡು ದೊಡ್ಡ ಮನೆಗೆ ಕರೆದುಕೊಂಡು ಬಂದು ರಾಜ್‍ಕುಮಾರ್ ಅವರ ಬಳಿ ವಿಷಯ ತಿಳಿಸಿದರು. ಆಗ ರಾಜ್‍ಕುಮಾರ್ ಹಾಗೂ ವರದಣ್ಣ ಇಬ್ಬರೂ ಕತೆಯನ್ನು ಕೇಳಿ ತಮ್ಮ ಬ್ಯಾನರ್‍ನಲ್ಲೇ ಚಿತ್ರ ನಿರ್ಮಿಸಲು ಒಪ್ಪಿದರು.

ಅದಾಗಲೇ ನಟ ಶಿವರಾಜ್‍ಕುಮಾರ್ ಫ್ಯಾಮಿಲಿ ಒರಿಯೆಂಟೆಡ್ ನಾಯಕರಾಗಿ ಹೆಂಗಳೆಯರನ್ನು ಗೆದ್ದಿದ್ದರು. ಪ್ರಥಮ ಬಾರಿಗೆ ರಗಡ್ ಲುಕ್‍ನಲ್ಲಿ ರೌಡಿಸಂ ಕಥೆಯೊಂದಿಗೆ ನಾಯಕನಾಗಿ ನಿಲ್ಲಲು ಸಿದ್ಧರಾದರು. ಈ ಚಿತ್ರದಲ್ಲಿ ರಿಯಲ್ ರೌಡಿಗಳ ಅಬ್ಬರವೂ ಇತ್ತು. ಇದರ ನಡುವೆ ಕಥೆಗೆ ಪೂರಕವಾದಂತೆ ರೌಡಿಗಳು ಇದ್ದ ಸ್ಥಳಗಳಲ್ಲೇ ಹಾಗೂ ಜನಬಿಡಿತ ಪ್ರದೇಶಗಳಲ್ಲೇ ಚಿತ್ರೀಕರಣ ಗೊಂಡ ಹೆಗ್ಗಳಿಕೆ ಚಿತ್ರಕ್ಕೆ ಸಲ್ಲುತ್ತದೆ.

ನಿರ್ದೇಶಕ ಉಪೇಂದ್ರ ತಮ್ಮ 3ನೇ ಚಿತ್ರದಲ್ಲೇ ಹೊಸ ಕ್ರೇಜ್ ಅನ್ನು ಹುಟ್ಟುಹಾಕುವ ತವಕದಲ್ಲಿದ್ದರು. ಶಿವಣ್ಣನಿಗೆ ಜೋಡಿಯಾಗಿ ಯುವನಟಿ ಪ್ರೇಮಾರನ್ನು ಕರೆತಂದರು. ಚಿತ್ರದ ಮತ್ತೊಂದು ಹೈಲೈಟ್ ಅಂದರೆ ನಾದಬ್ರಹ್ಮ ಹಂಸಲೇಖಾ ಅವರ ಸಂಗೀತ. ಈ ಚಿತ್ರದ ಒಂದೊಂದು ಹಾಡು ಇಂದಿಗೂ ಗುನುಗುವಂತಿದೆ.

ಡಾ. ರಾಜ್ ಅವರು ಹಾಡಿರುವ ಓ ಗುಲಾಬಿಯೇ ಹಾಗೂ ಬ್ರಹ್ಮಾನಂದ ಓಂಕಾರ ಈ ಎರಡು ಹಾಡುಗಳು ಪ್ರೇಕ್ಷಕರು ಇಂದಿಗೂ ಗುನುಗುತ್ತಿರುತ್ತಾರೆ. ದಾಖಲೆಯ ಹೊಸ ಹಾದಿಯನ್ನೇ ಬರೆದಂತಹ ಈ ಚಿತ್ರ ಸರಿಸುಮಾರು 630ಕ್ಕೂ ಹೆಚ್ಚು ಬಾರಿ ರಿರೀಲೀಸ್ ಆಗುವ ಮೂಲಕ ಸರ್ವಕಾಲಿಕ ದಾಖಲೆಯನ್ನು ಬರೆದಿದೆ.

ಅದಲ್ಲದೆ ತೆಲುಗು ಹಾಗೂ ಹಿಂದಿ ಭಾಷೆಗೂ ರೀಮೇಕ್ ಆಗಿ ಯಶಸ್ಸನ್ನು ಕಂಡಿತು. 90ರ ದಶಕದಲ್ಲಿ ಬಿಡುಗಡೆಗೊಂಡ ಓಂ ಚಿತ್ರ ಇಂದಿಗೂ ಮೈರೋಮಾಂಚನಗೊಳಿಸುವಂತಹ ದೃಶ್ಯಗಳನ್ನು ಸೆರೆದಿಡಿದಿರುವುದಂತೂ ಸತ್ಯ.

ಈ ಚಿತ್ರ 25 ವರ್ಷ ಪೂರೈಸಿರುವ ಸುಸಂದರ್ಭದಲ್ಲಿ ಚಿತ್ರೋದ್ಯಮದ ಹಲವಾರು ಗಣ್ಯರು ಚಿತ್ರತಂಡಕ್ಕೆ ಶುಭವನ್ನು ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಸೆಲಬ್ರೆಟಿಗಳು ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಟ್ವಿಟ್ಟರ್ ಮೂಲಕ ಓಂ ಚಿತ್ರದ ವಿಭಿನ್ನ ಪೆÇೀಸ್ಟರ್‍ಗಳನ್ನು ಅನಾವರಣ ಮಾಡುವ ಮೂಲಕ ಓಂ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Facebook Comments

Sri Raghav

Admin