ಓಮಿಕ್ರಾನ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೇ ಮದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ಓಮಿಕ್ರಾನ್ ನಿಯಂತ್ರಣಕ್ಕೆ ಮಾಸ್ಕ್ ಧಾರಣೆ, ಸಾಮಾಜಿಕ ಅಂತರವೇ ರಾಮಬಾಣ. ಸರ್ಕಾರದ ಮೇಲೆ ಜವಾಬ್ದಾರಿ ಹಾಕಿ ಅಜಾಗರೂಕವಾಗಿದ್ದರೆ ಜನಸಾಮಾನ್ಯರು ಭಾರೀ ಬೆಲೆ ತೆರಬೇಕಾದ ಅಪಾಯವಿದೆ. ಕೊರೊನಾ ಲಸಿಕೆ ಇಲ್ಲದ ಕಾಲದಲ್ಲಿ ಕಾಣಿಸಿಕೊಂಡ ಒಂದನೇ ಅಲೆ ಸಾಕಷ್ಟು ಪ್ರಾಣ ಹಾನಿ ಮಾಡಿತ್ತು.

ಅತಿ ಕಡಿಮೆ ಅವಧಿಯಲ್ಲಿ ದೇಶದ ವಿಜ್ಞಾನಿಗಳು ಲಸಿಕೆ ಅವಿಷ್ಕರಿಸಿದ್ದರು, ಕೇಂದ್ರ ಸರ್ಕಾರ ಜನವರಿಯಲ್ಲಿ ಲಸಿಕೆ ಅಭಿಯಾನವನ್ನು ಆರಂಭಿಸಿತ್ತು. ಆದರೆ ಅಪಪ್ರಚಾರದಿಂದ ಆರಂಭದಲ್ಲಿ ಅಭಿಯಾನಕ್ಕೆ ಹಿನ್ನೆಡೆಯಾಗಿತ್ತು. ಜನ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ತತ್ಪರಿಣಾಮ ಏಪ್ರಿಲ್‍ನಲ್ಲಿ ಕಾಣಿಸಿಕೊಂಡ ಎರಡನೇ ಅಲ್ಲೆ ಭಾರಿ ಅನಾವುತ ಸೃಷ್ಟಿಸಿತ್ತು. ಭಾರತವಷ್ಟೆ ಅಲ್ಲ ವಿಶ್ವವೇ ಎರಡನೇ ಅಲೆಯ ರೂಪಾಂತರ ಸೋಂಕಿನಿಂದ ಜರ್ಝತವಾಗಿ ಹೋಗಿತ್ತು.

ಡಿಸೆಂಬರ್ ವೇಳೆಗೆ ಮೂರನೇ ಅಲೆಯ ಮುನ್ಸೂಚನೆಯನ್ನು ಆ ವೇಳೆಯಲ್ಲೇ ನೀಡಲಾಗಿತ್ತು. ಕಾಕತಾಳಿಯ ಎಂಬಂತೆ ಈಗ ಓಮಿಕ್ರಾನ್ ರೂಪಾಂತರ ಸೋಂಕು ಕಾಣಿಸಿಕೊಂಡಿದೆ. ಇದು ಅಂತಿಂತ ಸೋಂಕಲ್ಲ ಶರವೇಗದಲ್ಲಿ ಹರಡಿ ಜನ ಜೀವನವನ್ನೇ ಅಲ್ಲೋಲ್ಲಕಲ್ಲೋಲ ಮಾಡಲಿದೆ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಜಗತ್ತನ್ನು ಎಚ್ಚರಿಸಿದ್ದಾರೆ.

# ಆಸ್ಪತ್ರೆಗೆ ದಾಖಲಾಗುವ ಅಪಾಯ:
ಭಾರತದಲ್ಲಿ ಬಹುತೇಕ ಮಂದಿ ಕೋವಿಡ್ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿರುವುದರಿಂದ ರೂಪಾಂತರಿ ಸೋಂಕು ತಗುಲಿದರೂ ಪ್ರಾಣ ಹಾನಿಯಾಗುವ ಪ್ರಮಾಣ ಕಡಿಮೆ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ ನಿರ್ಲಕ್ಷ್ಯಿಸಿದರೆ ಯಾವೆಲ್ಲಾ ಅಪಾಯಗಳಾಗಲಿವೆ ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಇಲ್ಲ. ಸೋಂಕು ಅಂಟಿಕೊಂಡರೆ ಸುಲಭಕ್ಕೆ ವಾಸಿಯಾಗುವುದಿಲ್ಲ, ಆಸ್ಪತ್ರೆಗೆ ದಾಖಲಾಗ ಬೇಕಾದ ಅನಿವಾರ್ಯತೆ ಇದೆ ಎಂದು ಹೇಳಲಾಗಿದೆ.

ಎರಡನೇ ಅಲೆಯಲ್ಲಿ ವೈದ್ಯಕೀಯ ವೆಚ್ಚ ಭರಿಸಲಾಗದೆ ಜನಸಾಮಾನ್ಯರು ಬಳಲಿ ಹೋಗಿದ್ದರು. ಬಳಿಕ ಕೋವಿಡ್ ಲಸಿಕೆ ಪಡೆಯದವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ಕೊಡಿಸಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಹೊಸದಾಗಿ ಎಚ್ಚರಿಕೆ ನೀಡಿದೆ. ಲಸಿಕೆ ಹಾಕಿಸಿಕೊಳ್ಳದವರು ಬಹಳ ಎಚ್ಚರಿಕೆಯಿಂದ ಇರಬೇಕಿದೆ. ಅದರಲ್ಲೂ ಮಕ್ಕಳನ್ನು ಬಹಳ ಜೋಪಾನವಾಗಿ ನೋಡಿಕೊಳ್ಳಬೇಕಿದೆ. ಈ ಬಾರಿ ಓಮಿಕ್ರಾನ್ ತಗುಲಿದರೆ ಆಸ್ಪತ್ರೆಗಳಿಗೆ ಹಣ ಕಟ್ಟಲಾಗದೆ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ.

# ಸೂಚನೆ ನೀಡದೆ ಅಂಟುವ ರೋಗಾಣು:
ಓಮಿಕ್ರಾನ್ ಹರಡುವ ವೇಗ ಹಿಂದಿನ ಎಲ್ಲಾ ಸೋಂಕುಗಳಿಗಿಂತಲೂ 10 ಪಟ್ಟು ಹೆಚ್ಚಾಗಲಿದೆ. ಮನೆಯಲ್ಲಿ ಒಬ್ಬರಿಗೆ ಸೋಂಕು ತಗುಲಿದರೆ ಉಳಿದ ಎಲ್ಲರಿಗೂ ಸೋಂಕು ತಗಲುವುದು ನಿರೀಕ್ಷಿತ ಎನ್ನಲಾಗಿದೆ.

ಹಿಂದಿನ ಎಲ್ಲಾ ಕೊರೊನಾಗಳ ಗುಣಲಕ್ಷಣಗಳು ಮೇಲ್ನೊಟಕ್ಕೆ ಕಾಣಸಿಗುತ್ತಿದ್ದವು. ಕೆಮ್ಮು, ಜ್ವರ, ಸುಸ್ತು, ವಾಸನೆ ಗುರುತಿಸಲಾಗದಿರುವುದು, ರುಚಿ ತಿಳಿಯದಿರುವ ಲಕ್ಷಣಗಳು ಕಾಣಿಸುತ್ತಿದ್ದವು. ಓಮಿಕ್ರಾನ್ ಸೋಂಕನ್ನು ಈ ಲಕ್ಷಣಗಳಿಂದ ಗುರುತಿಸುವುದು ಕಷ್ಟ ಎನ್ನಲಾಗುತ್ತಿದೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಸೋಂಕಿತರ ಹೃದಯ ಬಡಿತ ಹೆಚ್ಚಾಗಿರುವುದು ಕಂಡು ಬಂದಿದೆ. ತೀವ್ರ ಆಯಾಸ, ಅಲಸ್ಯದಿಂದ ಬಳಲಿಕೆ ಸೋಂಕಿನ ಪ್ರಾಥಮಿಕ ಲಕ್ಷಣಗಳು ಎಂದು ಹೇಳಲಾಗಿದೆ. ವಾಸನೆ ಗ್ರಹಿಸಲು ಸಾಧ್ಯವಾಗುತ್ತಿದೆ, ನಾಚಿಗೆ ರುಚಿ ಕಂಡು ಹಿಡಿಯುತ್ತಿದೆ. ಕೆಮ್ಮಿಲ್ಲ, ಜ್ವರವಿಲ್ಲ ಎಂದು ನಿರ್ಲಕ್ಷಿಸಿದರೆ ಓಮಿಕ್ರಾನ್ ಯಾವ ಮೂಲದಿಂದಲಾದರೂ ಅಂಟಿಕೊಳ್ಳುವ ಅಪಾಯವಿದೆ.
ಇದರಲ್ಲಿ ಹೃದಯ ಬಡಿತ ವೇಗವಾಗಿರುವುದರಿಂದ ಹೃದಯಘಾತವಾಗುವ ಅಪಾಯಗಳನ್ನು ತಳ್ಳಿ ಹಾಕುವಂತಿಲ್ಲ. ಹಾಗಾಗಿ ಪ್ರತಿ ಕ್ಷಣವೂ ಕಟ್ಟೆಚ್ಚರದಿಂದ ಇರುವುದು ಅತ್ಯಗತ್ಯವಾಗಿದೆ.

ಮುನ್ನೆಚ್ಚರಿಕೆಯೇ ಮದ್ದು:
ಕೋವಿಡ್‍ನ ರೂಪಾಂತರಿ ಸೋಂಕುಗಳಿಗೆ ಮುನ್ನೆಚ್ಚರಿಕೆಯೇ ಮದ್ದು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸೀನುವಾಗ, ಕೆಮ್ಮುವಾಗ ಡ್ರಾಪಲೆಟ್‍ಗಳು ಗಾಳಿಯಲ್ಲಿ ಪಸರಿಸದಂತೆ ಕರವಸ್ತ್ರ ಅಥವಾ ಯಾವುದಾರೂ ಬಟ್ಟೆಯನ್ನು ಅಡ್ಡಲಾಗಿ ಹಿಡಿದಿರಬೇಕು. ಕೆಮ್ಮು ಅಥವಾ ಸೀನುವರಿಂದ ಇತರರು ಅಂತರ ಕಾಪಾಡಿಕೊಳ್ಳುವುದು ಸೂಕ್ತ.
ಸ್ವಯಂ ರಕ್ಷಣೆ ದೃಷ್ಟಿಯಿಂದ ಹಿಂದಿಗಿಂತಲೂ ಜನ ಹೆಚ್ಚು ಜಾಗೃತರಾಗಿರಬೇಕಿದೆ.

Facebook Comments