ಮತ್ತೊಮ್ಮೆ ಎದುರಾಗಲಿದೆಯಾ ಕೊರೋನಾ ಕಷ್ಟಕಾಲ..? ಓಮಿಕ್ರಾನ್ ಸೃಷ್ಟಿಸಿದೆ ಗೊಂದಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.28- ವಿವಿಧ ದೇಶಗಳಲ್ಲಿ ಓಮಿಕ್ರಾನ್ ಪ್ರಸರಣ ಹೆಚ್ಚುತ್ತಿದ್ದಂತೆ ಹಲವಾರು ಗೊಂದಲಗಳು ಶುರುವಾಗಲಾರಂಭಿಸಿವೆ. ಕಳೆದ 10 ದಿನಗಳಲ್ಲಿ ಸುಮಾರು 600 ಜನ ವಿದೇಶಗಳಿಂದ ರಾಜ್ಯಕ್ಕೆ ಆಗಮಿಸಿದ್ದು, ಅದರಲ್ಲಿ 60 ಮಂದಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದಾರೆ ಎಂದು ಹೇಳಲಾಗಿದೆ.

ಕಳೆದ ಮೂರು ದಿನಗಳ ಹಿಂದೆ ದಕ್ಷಿಣ ಆಫ್ರಿಕ ಮತ್ತು ಬೋಟ್ಸಾನ್‍ನಲ್ಲಿ ಓಮಿಕ್ರಾನ್ ಪತ್ತೆಯಾಗಿದೆ. ಈ ಮೊದಲು ವಿಮಾನ ನಿಲ್ದಾಣಗಳಲ್ಲಿ ನಿಯಮಿತವಾದ ಪರೀಕ್ಷೆಗಳು ಇರಲಿಲ್ಲ. ಹೀಗಾಗಿ ಪ್ರಯಾಣಿಕರು ರಾಜ್ಯದೊಳಗೆ ಬಂದಿದ್ದು, ಎಲ್ಲೆಂದರಲ್ಲಿ ಸುತ್ತಾಡಿದ್ದಾರೆ.

ಸದ್ಯಕ್ಕೆ ಶಂಕಿತ ಇಬ್ಬರಲ್ಲಿ ಓಮಿಕ್ರಾನ್ ಪತ್ತೆಯಾಗಿಲ್ಲ. ಈ ಸೋಂಕು ರೋಗಲಕ್ಷಣ ಇಲ್ಲದೆ ಏಕಾಏಕಿ ಬಾಸಲಿದೆ ಎಂಬ ಮಾಹಿತಿ ಇದೆ. ಒಂದು ವೇಳೆ ಆ ರೀತಿ ಏನಾದರೂ ಆಗಿದ್ದರೆ..! ಎಂಬ ಆತಂಕ ಅಧಿಕಾರಿ ವಲಯವನ್ನು ಕಾಡುತ್ತಿದೆ.

ಒಂದು ವೇಳೆ ಒಂದು ಪ್ರಕರಣ ಪತ್ತೆಯಾದರೂ ಕೂಡ ಭಾರೀ ಅನಾಹುತಗಳಿಗೆ ಆಸ್ಪದ ಮಾಡಿಕೊಟ್ಟಂತಾಗುತ್ತದೆ. ರಾಜ್ಯದಲ್ಲಿ ಶಾಲಾಕಾಲೇಜುಗಳು ಯಥಾಸ್ಥಿತಿಗೆ ಮರಳಿದ್ದು, ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಮಕ್ಕಳು ಶಾಲೆಗೆ ಹೋಗಲಾರಂಭಿಸಿದ್ದಾರೆ.

ಜಾತ್ರೆ, ಹಬ್ಬಹರಿದಿನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಯಥಾಸ್ಥಿತಿಯಲ್ಲಿ ನಡೆಯುತ್ತಿವೆ. ವಿಧಾನಪರಿಷತ್ ಚುನಾವಣೆ ಪ್ರಚಾರ ಜೋರಾಗಿದೆ. ಸರ್ಕಾರಿ ಕಾರ್ಯಕ್ರಮಗಳು, ಸಾಂಸ್ಕøತಿಕ ಕ್ರೀಡಾ ಚಟುವಟಿಕೆಗಳು ಯಾವುದೇ ಅಡೆತಡೆ ಇಲ್ಲದೆ ನಿರಂತರವಾಗಿವೆ. ಮಾರುಕಟ್ಟೆಗಳು ಕೂಡ ಚೇತರಿಸಿಕೊಂಡು ಜನ ಮುಕ್ತವಾಗಿ ಸಂಚರಿಸುತ್ತಿದ್ದಾರೆ.

ಈ ವೇಳೆ ಓಮಿಕ್ರಾನ್ ಭೂತ ಆತಂಕ ಸೃಷ್ಟಿಸಿದೆ. ಮುಂದಿನ ತಿಂಗಳ 13ರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಅವೇಶನ ಕರೆಯಲಾಗಿದೆ. ಈಗಾಗಲೇ ಅದಕ್ಕೆ ಸಾಕಷ್ಟು ಪೂರ್ವ ತಯಾರಿಗಳು ಕೂಡ ಆರಂಭವಾಗಿವೆ.ಓಮಿಕ್ರಾನ್ ಆತಂಕದ ನಡುವೆ ಅವೇಶನ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.

ಸದ್ಯಕ್ಕೆ ರಾಜ್ಯದಲ್ಲಿ ಯಾವುದೇ ಪ್ರಕರಣಗಳು ವರದಿಯಾಗದೆ ಇರುವುದರಿಂದ ಆತಂಕಪಡಬೇಕಿಲ್ಲ. ಎಲ್ಲವೂ ಯಥಾಸ್ಥಿತಿಯಲ್ಲೇ ಮುಂದುವರೆಯಲಿದೆ ಎಂದು ಸರ್ಕಾರ ಸಮಾಧಾನ ಹೇಳುತ್ತಿದೆಯಾದರೂ ಒಳಗೊಳಗೆ ಆತಂಕ ಮನೆ ಮಾಡಿದೆ.

Facebook Comments

Sri Raghav

Admin