ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.25-ಚಲಿಸುತ್ತಿದ್ದ ಓಮ್ನಿ ಕಾರಿನ ಸೈಲೆನ್ಸರ್‍ಗೆ ಹುಲ್ಲು ಸುತ್ತಿಕೊಂಡು ಬೆಂಕಿ ಕಾಣಿಸಿಕೊಂಡ ಪರಿಣಾಮ ವಾಹನ ಸಂಪೂರ್ಣ ಬೆಂಕಿಗೆ ಆಹುತಿಯಾಗಿರುವ ಘಟನೆ ಶಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬುಕ್ಕಾಪಟ್ಟಣದಿಂದ ಶಿರಾಕ್ಕೆ ಜಗದೀಶ್ ಎಂಬುವರು ಓಮ್ನಿ ಕಾರಿನಲ್ಲಿ ನಾಲ್ವರೊಂದಿಗೆ ಬರುತ್ತಿದ್ದರು.

ಮಾರ್ಗಮಧ್ಯೆ ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಹುಲ್ಲು ಕಾರಿನ ಸೈಲೆನ್ಸರ್‍ಗೆ ಸುತ್ತಿಕೊಂಡಿದೆ. ಪರಿಣಾಮವಾಗಿ ಬೆಂಕಿ ಕಾಣಿಸಿಕೊಂಡು ನೋಡನೋಡುತ್ತಿದ್ದಂತೆ ಕಾರನ್ನು ಆವರಿಸಿದೆ. ತಕ್ಷಣ ಕಾರನ್ನು ರಸ್ತೆ ಬದಿ ನಿಲ್ಲಿಸಿ ಎಲ್ಲರೂ ಇಳಿದಿದ್ದಾರೆ.

ಜಗದೀಶ್ ಸಮೀಪದಲ್ಲೇ ಇದ್ದ ಎಚ್‍ಪಿ ಗ್ಯಾಸ್ ವಿತರಣಾ ಕೇಂದ್ರದಲ್ಲಿ ಬೆಂಕಿ ನಂದಿಸುವ ಸಾಧನ ಕೇಳಿದರೂ ನೌಕರರು ನೀಡದ ಕಾರಣ ಬೆಂಕಿ ನಂದಿಸಲಾಗದೆ ಕಾರು ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಕಿ ನಂದಿಸಲು ಸಾಧನ ನೀಡದ ನೌಕರರು ಮತ್ತು ಮಾಲೀಕರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.  ಘಟನೆ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments