ಕೊರೋನಾ ಹೋರಾಟದಲ್ಲಿ ದೃಢಸಂಕಲ್ಪದಿಂದ ಮುನ್ನಡೆಯುತ್ತಿದ್ದೇವೆ, ಜಯ ಶತ:ಸಿದ್ಧ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.24-ಕೊರೊನಾ ಹೆಮ್ಮಾರಿ ಹಿಂದೆಂದೂ ಕಂಡು ಕೇಳರಿಯದಂಥ ಹೊಸ ದೊಡ್ಡ ಸವಾಲು ಹಾಕಿದೆ. ನಾವು ಈ ಪಿಡುಗಿನಿಂದ ವಿಚಲಿತರಾಗದೆ ಇದನ್ನು ನಿರ್ಮೂಲನೆ ಮಾಡಲು ನಿಶ್ಚಯ ಮಾಡಿದ್ದೇವೆ ಎಂದು ಪ್ರಧಾನ ನರೇಂದ್ರ ಮೋದಿ ಹೇಳಿದ್ದಾರೆ.

ಈ ಮಹಾಮಾರಿಯಿಂದ ನಮಗೆ ಅನೇಕಾನೇಕ ಅಡ್ಡಿ-ಆತಂಕಗಳು ಎದುರಾಗಿದ್ದರೂ, ನಾವು ದೃಢಸಂಕಲ್ಪದಿಂದ ಇನ್ನು ಮಟ್ಟ ಹಾಕಲು ಮುನ್ನಡೆಯುತ್ತಿದ್ದೇವೆ ಹಾಗೂ ರಾಷ್ಟ್ರರಕ್ಷಣೆ ಮತ್ತು ಜನರ ಅಮೂಲ್ಯ ಪ್ರಾಣ ಉಳಿಸಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಈ ಮಹಾ ಹೋರಾಟದಲ್ಲಿ ಗೆಲವು ನಮಗೆ ಶತಃಸಿದ್ಧ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದ ಗ್ರಾಮ ಪಂಚಾಯಿತಿ ಮುಖ್ಯಸ್ಥರು ಮತ್ತು ಸದಸ್ಯರೊಂದಿಗೆ ಇಂದು ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾತನಾಡಿದ ಅವರು, ನಾವು ಸಂಪೂರ್ಣ ಸ್ವಯಂ ಸ್ವಾವಲಂಬಿಗಳಾಗಲು ಕೊರೊನಾ ದೊಡ್ಡ ಪಾಠ ಕಲಿಸಿದೆ ಎಂದು ಬಣ್ಣಿಸಿದರು.

ಕೋವಿಡ್-19 ವೈರಾಣು ದಾಳಿ ಭಾರತ ಮತ್ತು ವಿಶ್ವಕ್ಕೆ ದೊಡ್ಡ ಸವಾಲಾಗಿದೆ. ಇದರಿಂದ ನಾವು ಹೊಸ ಸಂಗತಿಗಳನ್ನು ಕಲಿಯುವಂತಾಗಿದೆ ಎಂದು ಪ್ರಧಾನಿ ತಿಳಿಸಿದರು.  ನಮಗೆ ಇರುವ ಸೀಮಿತ ಸಂಪನ್ಮೂಲಗಳ ನಡುವೆಯೂ ಕೊರೊನಾ ಬಿಕ್ಕಟ್ಟನ್ನು ನಾವು ಸಮರ್ಥವಾಗಿ ಎದುರಿಸುತ್ತಿದ್ದೇವೆ.

ನಮ್ಮ ದೇಶದ ಜನರು ಈ ಸಂಕಷ್ಟ ಕಾಲದಲ್ಲಿ ಇದಕ್ಕೆ ತುತ್ತಾಗಲೇ ಈ ಪೀಡೆ ಒಡ್ಡಿರುವ ಸವಾಲನ್ನು ಸ್ವೀಕರಿಸಿ ಅದನ್ನು ತೊಲಗಿಸಲು ಶ್ರಮಿಸುತ್ತಿದ್ದಾರೆ ಎಂದು ಭಾರತೀಯರ ಬಗ್ಗೆ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದರು.

ನಮ್ಮ ದೇಶದ ಜನರ ಅಪಾರ ಪರಿಶ್ರಮ ಮತ್ತು ತ್ಯಾಗದ ಫಲವಾಗಿ ಭಾರತವು ಕೊರೊನಾ ಆಕ್ರಮಣವನ್ನು ಎದುರಿಸುತ್ತಿರುವ ರೀತಿ ಬಗ್ಗೆ ಇಡೀ ವಿಶ್ವ ಬೆರಗಾಗಿ ನೋಡುತ್ತಿದೆ ಎಂದು ಪ್ರಧಾನಿ ವ್ಯಾಖ್ಯಾನಿಸಿದರು.  ಕೊರೊನಾ ಲಾಕ್‍ಡೌನ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಜನರು ಅದರಲ್ಲೂ ಗ್ರಾಮಸ್ಥರು ತೋರಿರುವ ಸಹನೆ ಮತ್ತು ಸಂಯವನ್ನು ಅವರು ಪ್ರಶಂಸಿಸಿದರು.

ಗ್ರಾಮಾಂತರ ಪ್ರದೇಶದ ಜನರು ಸಾಮಾಜಿಕ ಅಂತರವನ್ನು ಅತ್ಯಂತ ಸರಳ ಪದಗಳಲ್ಲಿ ಅಂದರೆ ದೋ ಗಜ್ ದೂರ್ (ಎರಡು ಗಜ ದೂರವಿರಿ) ಎಂಬ ವಾಕ್ಯದಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಾರೆ ಎಂದು ಹೇಳಿದರು.

ನಮ್ಮ ದೇಶದ ಗ್ರಾಮೀಣ ಭಾಗದ ಜನತೆ ಈ ಸಂಕಷ್ಟ ಸಂದರ್ಭದಲ್ಲಿಯೂ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸ್ವಯಂ ಸ್ವಾವಲಂಬಿಗಳಾಗಿದ್ದಾರೆ. ಇದೊಂದು ಮಹತ್ವದ ಸಂಗತಿ ಎಂದು ಮೋದಿ ಒತ್ತಿ ಹೇಳಿದರು.

ಗ್ರಾಮಗಳು ನಮ್ಮ ದೇಶದ ಜೀವನಾಡಿ, ಕೃಷಿಕರು ನಮ್ಮ ದೇಶದ ಬೆನ್ನುಲುಬು. ಗ್ರಾಮಗಳು ಮತ್ತು ರೈತರನ್ನು ರಕ್ಷಿಸುವುದು ಎಂದಿಗೂ ನಮ್ಮ ಸರ್ಕಾರದ ಪ್ರಥಮಾದ್ಯತೆ ಎಂದು ಪ್ರಧಾನಿ ಪುನರುಚ್ಚರಿಸಿದರು.

Facebook Comments

Sri Raghav

Admin