ನಟ ವಿನೋದ್‍ರಾಜ್‍ ಕಾರಿನಲ್ಲಿದ್ದ 1 ಲಕ್ಷ ಹಣ ದೋಚಿದ್ದ ಆರೋಪಿ ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Vinod-Raj--01

ಬೆಂಗಳೂರು,ನ.9-ನಟ ವಿನೋದ್ ರಾಜ್‍ಗೆ ಯಾಮಾರಿಸಿ ಒಂದು ಲಕ್ಷ ದೋಚಿದ್ದ ಆರೋಪಿಯನ್ನು ನೆಲಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಓಜಿಕುಪ್ಪಂ ಮೂಲದ ರಾಜು ಅಲಿಯಾಸ್ ಹೈಟೆಕ್ ರಾಜ ಬಂಧಿತ ಆರೋಪಿ.  ಒಂದು ತಿಂಗಳ ಹಿಂದೆ ನಗರದ ಹೊರವಲಯ ನೆಲಮಂಗಲದಲ್ಲಿ ಅಭಿಮಾನಿಯ ಸೋಗಿನಲ್ಲಿ ಬಂದ ಹೈಟೆಕ್ ರಾಜ, ನಟ ವಿನೋದ್ ರಾಜ್ ಕಾರಿನಲ್ಲಿದ್ದ ಒಂದು ಲಕ್ಷ ಹಣವನ್ನು ಎಗರಿಸಿ ಪರಾರಿಯಾಗಿದ್ದ.

ಈ ಸಂಬಂಧ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಸಿಪಿಐ ಅನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿ ಸದ್ಯ ಆರೋಪಿಯನ್ನ ಬಂಧಿಸಲಾಗಿದೆ. ಹೆಸರಿನಂತೆ ಹೈಟೆಕ್ ಆಗಿದ್ದ ಆರೋಪಿ ಹೈಟೆಕ್ ರಾಜ, ಕದ್ದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಹೈ ಬ್ರ್ಯಾಂಡ್ ಬಟ್ಟೆ, ಶೂ, ಗಾಗಲ್ಸ್‍ನೊಂದಿಗೆ ಶೋಕಿ ಮಾಡ್ತಾ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗಿದೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ಅವರ ಪುತ್ರ , ನಟ ವಿನೋದ್ ರಾಜ್ ವರನ್ನು ಯಾಮಾರಿಸಿ ಅವರ ಕಾರಲ್ಲಿದ್ದ 1 ಲಕ್ಷ ರೂ. ಕಳ್ಳತನ ಮಾಡಲಾಗಿತ್ತು. ಈ ಕುರಿತು ನಟ ವಿನೋದ್ ರಾಜ್ ನೆಲಮಂಗಲ ಪೊಲೀಸರಿಗೆ ದೂರು ನೀಡಿದ್ದರು. ಕಾರಿನ ಟಯರ್ ಪಂಚರ್ ಆಗಿದೆ ಎಂದು ಹೇಳಿ ನಟ ವಿನೋದ್ ರಾಜ್ ಅವರ ಕಾರಿನಲ್ಲಿದ್ದ ಒಂದು ಲಕ್ಷ ರೂಪಾಯಿಯನ್ನು ಇಬ್ಬರು ಕಳ್ಳರು ದೋಚಿದ್ದರು.

ತಮ್ಮ ತೋಟದ ಕೂಲಿಯಾಳುಗಳಿಗೆ ಸಂಬಳ ನೀಡಲು ನಟ ವಿನೋದ್ ರಾಜ್ ಅವರು ಬ್ಯಾಂಕ್ ನಿಂದ ಒಂದು ಲಕ್ಷ ರೂಪಾಯಿ ಹಣವನ್ನು ಡ್ರಾ ಮಾಡಿಕೊಂಡು ಬಂದು ಕಾರನ್ನು ಸಿಎನ್ ಆರ್ ಬಟ್ಟೆ ಮಳಿಗೆ ಬಳಿ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಬಂದ ಇಬ್ಬರು ಏನ್ ಸರ್ ಚೆನ್ನಾಗಿದ್ದೀರಾ ಎಂದು ಆತ್ಮೀಯತೆಯಿಂದ ಮಾತನಾಡಿಸಿದ್ದರಂತೆ. ಬಳಿಕ ಕಾರು ಪಂಚರ್ ಆಗಿದೆ ಎಂದು ಹೇಳಿ ರಿಪೇರಿ ಮಾಡುವ ನೆಪದಲ್ಲಿ ಕಾರಿನೊಳಗೆ ಇದ್ದ ಒಂದು ಲಕ್ಷ ರೂಪಾಯಿ ಹಣವನ್ನು ಕದ್ದು ಪರಾರಿಯಾಗಿದ್ದರು.

Facebook Comments